ತುಮಕೂರು: ಕಾಂಗ್ರೆಸ್ ನಾಯಕರ ನಡುವಿನ ಕಿತ್ತಾಟ, ಒಗ್ಗಟ್ಟು ಇಲ್ಲದಿರುವುದೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಎಂದು ಸತ್ಯಶೋಧನಾ ಸಮಿತಿ ವರದಿ ನೀಡಿರುವುದು ನಿಜ. ಈ ಕುರಿತು ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನ ಹೆಗ್ಗೆರೆಯ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಘಟಿಕೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸತ್ಯಶೋಧನಾ ಸಮಿತಿ ವರದಿಯಲ್ಲಿ ಒಗ್ಗಟ್ಟಿನ ಕೊರತೆಯಿಂದಲೇ ಸೋಲುಂಟಾಗಿದೆ ಎಂದು ತಿಳಿದು ಬಂದಿದೆ. ನಾಯಕರ ನಡುವೆ ಯಾಕೆ ಭಿನ್ನಾಭಿಪ್ರಾಯ ಮೂಡಿತು ಎನ್ನುವುದರ ಕುರಿತು ಚರ್ಚೆ ಮಾಡುತ್ತೇವೆ. ಪಕ್ಷದ ಪ್ರಮುಖ ನಾಯಕತ್ವದಿಂದ ಆಗಿದೆಯೋ ಅಥವಾ ಸ್ಥಳೀಯ ಮುಖಂಡರಿಂದ ಆಗಿದೆಯೋ ಎಂಬುದನ್ನು ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
Advertisement
Advertisement
ಈ ಕುರಿತು ಸೆಪ್ಟೆಂಬರ್ 18ರಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕ್ರಮ ಕೈಗೊಳ್ಳುವ ಕುರಿತು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
Advertisement
ಅದಷ್ಟು ಬೇಗ ಹೈಕಮಾಂಡ್ ವಿರೋಧ ಪಕ್ಷ ನಾಯಕರನ್ನು ಆಯ್ಕೆ ಮಾಡಲಿದೆ. ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ. ಯಾರೇ ಆದರೂ ನಮ್ಮ ನಾಯಕರೇ. ಹೈ ಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆಯೋ ಗೊತ್ತಿಲ್ಲ. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೆನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
Advertisement
ಅನರ್ಹರಿಗೆ ತಪ್ಪಿನ ಅರಿವಾಗಿದೆ
ಅನರ್ಹ ಶಾಸಕರಿಗೆ ತಮ್ಮ ತಪ್ಪಿನ ಅರಿವಾಗಿದೆ. ಮುಂದಿನ ದಿನದಲ್ಲಿ ಏನಾಗುತ್ತೋ ಕಾದು ನೋಡೋಣ. ಅನರ್ಹರನ್ನು ಮತ್ತೆ ಪಕ್ಷಕ್ಕೆ ಕರೆದುಕೊಳ್ಳುವ ಸನ್ನಿವೇಶ ಬರುವುದಿಲ್ಲ. ಒಂದು ವೇಳೆ ಬಂದರೆ, ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ರಾಜ್ಯ ಬಿಜೆಪಿ ಸರ್ಕಾರದ ಉಳಿವಿನ ಬಗ್ಗೆ ಸಮಯ ನಿಗದಿ ಮಾಡಲ್ಲ, ಆದರೆ ಹೆಚ್ಚು ಕಾಲ ಈ ಸರ್ಕಾರ ಉಳಿಯುವುದಿಲ್ಲ. ಮಧ್ಯಂತರ ಚುನಾವಣೆ ಕುರಿತು ನನಗೆ ತಿಳಿದಿಲ್ಲ. ಆದರೆ, ಮಧ್ಯಂತರ ಚುನಾವಣೆ ನಡೆದರೆ ನಾವು ತಯಾರಾಗುತ್ತಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ವರದಿಯಲ್ಲೇನಿದೆ?
ಕಾಂಗ್ರೆಸ್ ಶಾಸಕರ ಸ್ವಪ್ರತಿಷ್ಠೆ, ಕೆಲವರ ಪಕ್ಷ ವಿರೋಧಿ ಚಟುವಟಿಕೆ, ನಾಯಕರ ನಡುವಿನ ಆಂತರಿಕ ಕಿತ್ತಾಟಗಳಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ನೇತೃತ್ವದ ಸತ್ಯ ಶೋಧನಾ ಸಮಿತಿ ತಿಳಿಸಿದೆ. ತನ್ನ ವರದಿಯಲ್ಲಿ ಸಮಿತಿ ಕಾಂಗ್ರೆಸ್ ಕಾಯಕರ್ತರು ಕೆಲಸ ಮಾಡಿದ್ದರೂ ನಾಯಕರ ಒಳಜಗಳಿಂದಾಗಿ ಅಭ್ಯರ್ಥಿಗಳು ಸೋತಿದ್ದಾರೆ. ಚುನಾವಣೆ ಸೋಲಿಗೆ ಮೈತ್ರಿಯೂ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಕ್ಟೋಬರ್ 2ರಂದು ಕೆಪಿಸಿಸಿಗೆ ಈ ವರದಿಯನ್ನು ಸಲ್ಲಿಸಲು ಸಮಿತಿ ತೀರ್ಮಾನಿಸಿದೆ.