ಈ ಮೂರು ಸವಾಲುಗಳಿಗೆ ಪ್ರತಿತಂತ್ರ ಹೂಡಿದ್ರೆ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಂತೆ!

Public TV
6 Min Read
MODI RAHUL

ಗುಜರಾತ್ ಚುನಾವಣೆ ಸದ್ಯ ಇಡೀ ದೇಶದ ಗಮನ ಸೆಳೆಯುತ್ತಿದೆ. ಪ್ರಧಾನಿ ಮೋದಿ ತವರಿನಲ್ಲಿ ವಿಜಯ ಪತಾಕೆ ಹಾರಿಸುವುವರು ಯಾರು ಎಂಬ ಕುತೂಹಲಕ್ಕೆ ದೇಶವೇ ತದೇಕಚಿತ್ತದಿಂದ ನೋಡುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಬೇಕಾದರೆ ತಮ್ಮ ರಾಜ್ಯವನ್ನು ಜಯಗಳಿಸಲೇಬೇಕು ಎಂದು ಪಣ ತೊಟ್ಟಿರುವ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಈ ಚುನಾವಣೆ ಎಷ್ಟು ಮಹತ್ವವೋ ಅಷ್ಟೇ ಎಐಸಿಸಿ ಗದ್ದುಗೆ ಏರಲಿರುವ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್‍ಗೂ ಮಹತ್ವದಾಗಿದೆ.

ಕೆಲ ತಿಂಗಳುಗಳ ಹಿಂದೆ ನಡೆದ ಪಂಚ ರಾಜ್ಯ ಚುನಾವಣೆ ಯಲ್ಲಿ ಮೋದಿ ಮ್ಯಾಜಿಕ್ ಮಾಡಿ ಗೆಲುವಿನ ನಗೆ ಬೀರಿದ್ರು. ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಪಣ ತೊಟ್ಟಿರುವ ಬಿಜೆಪಿಯ ಈ ಚಾಣಕ್ಯರು, ತವರು ರಾಜ್ಯದಲ್ಲೂ ಕಾಂಗ್ರೆಸ್‍ಗೆ ಸೋಲಿನ ರುಚಿ ಕಾಣಿಸಿ ಮತ್ತೊಮ್ಮೆ ಬೀಗಲು ತಯಾರಿ ನಡೆಸುತ್ತಿದ್ದಾರೆ.

ಈಗಾಗಲೇ ಗುಜರಾತ್ ನಲ್ಲಿ ಸೂಕ್ತ ರಾಜ್ಯ ನಾಯಕರ ಕೊರತೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯೇ ನೇರವಾಗಿ ಅಖಾಡಕ್ಕೆ ಇಳಿಯುವ ಪರಿಸ್ಥಿತಿ ಬಂದಿದೆ. ಅಮಿತ್ ಶಾ, ಮೋದಿ ಸೇರಿದಂತೆ ಇಡೀ ಕೇಂದ್ರ ಸಂಪುಟದ ಸಚಿವರು ಹಾಗೂ ಪ್ರಭಾವಿ ಬಿಜೆಪಿ ಸಿಎಂಗಳು ಗುಜರಾತ್ ನಲ್ಲಿ ಠಿಕಾಣಿ ಹೂಡಿ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಮಾಡಲಾದ ಅಭಿವೃದ್ಧಿ ಮಾದರಿಯನ್ನು ಜನರ ಮುಂದಿಟ್ಟು ವೋಟ್ ಕೇಳಲು ಬಿಜೆಪಿ ಸಿದ್ಧತೆ ನಡೆಸಿಕೊಂಡಿದೆ.

NARENDRA Modi 1 1

ಕಾಂಗ್ರೆಸ್ಸಿಗೂ ಇದು ಒಂದು ರೀತಿಯಲ್ಲಿ ರಮ್ಯ ಕಾಲ ಅಂತಲೇ ಹೇಳಬಹುದು. ಪಂಚ ರಾಜ್ಯಗಳ ಪೈಕಿ ಪಂಜಾಬ್ ನಲ್ಲಿ ಭರ್ಜರಿ ಗೆಲವು ಸಾಧಿಸಿದ್ದ ಕಾಂಗ್ರೆಸ್ ಗೋವಾದಲ್ಲಿ ತನ್ನ ನಿರ್ಲಕ್ಷ್ಯ ದಿಂದ ಅಧಿಕಾರದಿಂದ ದೂರ ಉಳಿದುಕೊಂಡಿತ್ತು. ಇತ್ತೀಚಿಗೆ ನಡೆದ ಗುಜರಾತ್ ರಾಜಸಭಾ ಚುನಾವಣೆ ಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕಾಂಗ್ರೆಸ್ ತಮ್ಮ ಮುಖಂಡ ಹಾಗೂ ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್‍ರನ್ನ ಗೆಲಿಸುಕೊಂಡು ಬರುವಲ್ಲಿ ಸಫಲವಾಗಿತ್ತು. ಒಂದಿಷ್ಟು ಪ್ರಾದೇಶಿಕ ಚುನಾವಣೆ ಗೆಲುವು ಕಾಂಗ್ರೆಸ್ ಪಾಲಿಗೆ ಮರುಭೂಮಿಯಲ್ಲಿ ಓಯಸಿಸ್ ಕಂಡಂತೆ ಭಾಸವಾಗಿದ್ದು ಗುಜರಾತ್ ಚುನಾವಣೆ ಗೆಲ್ಲುವ ತವಕದಲ್ಲಿ ಬಿಜೆಪಿಗೆ ಭಾರೀ ಪೈಪೋಟಿ ನೀಡುತ್ತಿದೆ.

ಅಷ್ಟೇ ಅಲ್ಲದೇ ಕೆಲವೇ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಲಿರುವ ರಾಹುಲ್ ಗಾಂಧಿಗೆ ಗುಜರಾತ್ ಚುನಾವಣೆ ಆರಂಭಿಕ ಸವಾಲಾಗಿದೆ. ಹೀಗಾಗಿ ರಾಹುಲ್ ಈ ಸವಾಲನ್ನು ಗಂಭೀರವಾಗಿ ಸ್ವೀಕರಿಸಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಸಾಮಾನ್ಯ ಜನರೊಂದಿಗೆ ಬೆರೆತು ಅವರ ನಾಡಿ ಮಿಡಿತ ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಜೊತೆಗೆ ಯುವ ನಾಯಕರಾದ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೆವಾನಿ, ಅಲ್ಪೇಶ್ ಠಾಕೂರ್ ಬೆಂಬಲ ನೀಡಿದ್ದರೂ ಕಾಂಗ್ರೆಸ್ ಮೂರು ಪ್ರಮುಖ ಸವಾಲುಗಳಿವೆ.

1. ಬಿಜೆಪಿಯ ಅಭಿವೃದ್ಧಿಯ ಅಜೆಂಡಾ
ಗುಜರಾತ್ ಅಭಿವೃದ್ಧಿ ಮಾದರಿಯನ್ನು ಮೂಲ ಮಂತ್ರವನ್ನಾಗಿಟ್ಟುಕೊಂಡು ಎಲ್ಲ 182 ಕ್ಷೇತ್ರಗಳಲ್ಲೂ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ. ಕಾಂಗ್ರೆಸ್ ಅಭಿವೃದ್ಧಿ ಹುಚ್ಚು ಹಿಡಿದು ದಾರಿ ತಪ್ಪಿದೆ ಎಂಬಂತೆ ಹ್ಯಾಶ್‍ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ. ಇದರ ನಡುವೆಯೇ ಬಿಜೆಪಿ ತನ್ನ ಅಬ್ಬರ ಅಭಿವೃದ್ಧಿ ಪ್ರಚಾರ ಮುಂದುವರಿಸಿ ಕೊಂಡು ಹೋಗುತ್ತಿದೆ.

ಸೆಪ್ಟೆಂಬರ್ 14 ರಂದು ಪ್ರಧಾನಿ ಮೋದಿ, ಜಪಾನ್ ಪ್ರಧಾನಿ ಶಿಂಜೋ ಅಬೆ ಜೊತೆಗೂಡಿ ರೋಡ್ ಶೋ ನಡೆಸಿದ್ದರು. ಬುಲೆಟ್ ರೈಲು ಯೋಜನೆ ವಿಚಾರಚವಾಗಿದ್ದರೂ ಜಪಾನ್ ಪ್ರಧಾನಿಯ ಜೊತೆ ರೋಡ್ ಶೋ ನಡೆಸಿರುವುದು ಜನರ ಗಮನವನ್ನು ಮತ್ತೊಮ್ಮೆ ಅಭಿವೃದ್ಧಿಯತ್ತ ಸೆಳೆಯಲೆಂದೇ ಮಾಡಿದ ತಂತ್ರ ಎನ್ನುವುದನ್ನು ಎಲ್ಲರಿಗೂ ತಿಳಿದ ವಿಚಾರ. ಅಹಮದಾಬಾದ್ – ಮುಂಬೈ ನಡುವೇ ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಅಡಿಪಾಯ ಹಾಕುವ ಮೂಲಕ ಜನರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ರು. ಇದರ ಜೊತೆಗೆ ಸರ್ದಾರ್ ಸರೋವರ ಆಣೆಕಟ್ಟು ಲೋಕಾರ್ಪಣೆ ಮಾಡಿ ವಿದ್ಯುತ್, ಕೃಷಿ, ಕುಡಿಯುವ ನೀರು ನೀಡುವುದಾಗಿ ಮತ್ತಷ್ಟು ಜನಪ್ರಿಯತೆ ಮೋದಿ ಗಳಿಸಿಕೊಂಡಿದ್ದಾರೆ. ಬುಲೆಟ್ ರೈಲು ಯೋಜನೆ ಈಗ ಗುಜರಾತ್ ಜನತೆಗೆ ಲಾಭ ತಂದು ಕೊಡದೇ ಇದ್ದರೂ ಬಹಳಷ್ಟು ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳಿ ಜನರ ಮೂಡ್ ಬದಲಾಯಿಸುವಲ್ಲಿ ಮೋದಿ ತಂತ್ರ ವರ್ಕೌಟ್ ಆದಂತೆ ಕಾಣುತ್ತಿದೆ. ಅಭಿವೃದ್ಧಿ ಬಗ್ಗೆ ಬಿಜೆಪಿಯ ಜನಾಭಿಪ್ರಾಯನ್ನು ಕಾಂಗ್ರೆಸ್ ಹೇಗೆ ಬದಲಾವಣೆ ಮಾಡುತ್ತದೆ ಎನ್ನುವುದು ಸದ್ಯದ ಪ್ರಶ್ನೆ.  ಇದನ್ನೂ ಓದಿದೆಹಲಿ ಬಿಟ್ಟು ಗುಜರಾತ್ ನಲ್ಲಿ ಜಪಾನ್ ಪ್ರಧಾನಿಗೆ ರಾಜಾತಿಥ್ಯ ನೀಡಿದ್ದು ಯಾಕೆ: ಕಾಂಗ್ರೆಸ್ ಪ್ರಶ್ನೆ

modi japan road show

2. ವಘೇಲಾ, ಕೇಜ್ರಿವಾಲ್ ಮತ್ತು ಪವಾರ್ ಓಟ್ ಕಟ್ಟರ್
ಗುಜರಾತ್ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ ಶಂಕರ್ ಸಿನ್ಹಾ ವಘೇಲಾ ಕಾಂಗ್ರೆಸ್ ಗೆ ಅಪಾಯಕಾರಿ. ಇತ್ತೀಚಿಗೆ ಕಾಂಗ್ರೆಸ್ ತೊರೆದಿರುರುವ ಶಂಕರ್ ಸಿನ್ಹಾ ವಘೇಲಾ ಜನಾ ವಿಕಲ್ಪ ಪಾರ್ಟಿ ಸೇರಿಕೊಂಡಿದ್ದಾರೆ. ಗುಜರಾತ್ ರಾಜ್ಯಸಭೆ ಚುನಾವಣೆ ವೇಳೆ ಬಂಡಾಯ ಎದ್ದು ಕಾಂಗ್ರೆಸ್ ನಿಂದ ಹೊರ ಬಂದಿದ್ದ ವಘೇಲಾ ತನ್ನೊಂದಿಗೆ 13 ಮಂದಿ ಶಾಸಕರನ್ನು ಕರೆತಂದಿದ್ದರು. ಈ 13 ಮಂದಿ ಪೈಕಿ 10 ಮಂದಿ ಶಾಸಕರು ಬಿಜೆಪಿ ಸೆರ್ಪಡೆಯಾಗಿದ್ದಾರೆ. ಇನ್ನಷ್ಟು ವಘೇಲಾ ಬೆಂಬಲಿಗರು ಕಾಂಗ್ರೆಸ್ ಒಳಗೆ ಇದ್ದಾರೆ ಎನ್ನಲಾಗಿದೆ.

ಇನ್ನೂ ದೆಹಲಿಯಲ್ಲಿ ಸಂಚಲನ ಮೂಡಿಸಿ ಪಂಜಾಬ್ ನಲ್ಲಿ ಭರವಸೆ ಉಳಿಸಿಕೊಂಡಿರುವ ಆಮ್ ಆದ್ಮಿ ಪಾರ್ಟಿ ಕೂಡಾ ಕಣಕ್ಕೆ ಇಳಿಯಲಿದೆ. ಅಕ್ಟೋಬರ್ 2 ರಿಂದಲೇ ಪ್ರಚಾರ ಆರಂಭಿಸಿರುವ ಆಪ್ ಕೆಲ ಕ್ಷೇತ್ರಗಳಲ್ಲಿ ಮಾತ್ರ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದೆ. ಆಪ್ ಜಯಗಳಿಸುವುದು ಕಷ್ಟವಾಗಿದ್ದರೂ ಕಾಂಗ್ರೆಸ್ ಬೀಳುವ ಮತ ಕಸಿದರೆ ಬಿಜೆಪಿಗೆ ಅದು ವರವಾಗಲಿದೆ.

ಶರದ್ ಪವಾರ್ ನೇತೃತ್ವದ ಎನ್‍ಸಿಪಿ ಸಹ 70 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದೆ. 2012 ರಲ್ಲಿ ಒಂಭತ್ತು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎನ್‍ಸಿಪಿ ಎರಡು ಸ್ಥಾನಗಳನ್ನು ಗೆದ್ದು ಕೊಂಡಿತ್ತು. 2007 ರಲ್ಲಿ ಹತ್ತು ಸ್ಥಾನಗಳಿಗೆ ಸ್ಪರ್ಧಿಸಿ ಮೂರು ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಈಗ 70 ಸ್ಥಾನಗಳಲ್ಲಿ ಎನ್‍ಸಿಪಿ ಸ್ಪರ್ಧಿಸುತ್ತಿರುವುದು ಕಾಂಗ್ರೆಸ್ಸಿಗೆ ದೊಡ್ಡ ಸವಾಲು. ಕಳೆದ ಹತ್ತು ವರ್ಷಗಳ ಯುಪಿಎ ಆಡಳಿತದಲ್ಲಿ ಎನ್‍ಸಿಪಿ ಕಾಂಗ್ರೆಸ್ ನ ಭಾಗವಾಗಿತ್ತು. ಆದ್ರೆ ರಾಜ್ಯಸಭೆ ಚುನಾವಣೆ ವೇಳೆ ಇಬ್ಬರು ಶಾಸಕರು ಬಿಜೆಪಿ ಪರ ಮತ ಹಾಕಿದ್ದರು.

ಬಿಹಾರದಲ್ಲಿ ಈಗ ನಿತೀಶ್ ಕುಮಾರ್ ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿಕೊಂಡಿದ್ದರೂ ಚುನಾವಣೆ ವೇಳೆ ಜೆಡಿಯು, ಆರ್‍ಜೆಡಿ, ಕಾಂಗ್ರೆಸ್ ಮಹಾಘಟ್‍ಬಂಧನ್ ಯಶಸ್ವಿಯಾಗಿದ್ದರಿಂದ ಬಿಜೆಪಿ ಸೋತಿತ್ತು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೆ ಎಸ್‍ಪಿ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಇದರಿಂದಾಗಿ ಮತಗಳು ಹಂಚಿಹೋಗಿ ಬಿಜೆಪಿ ಜಯಭೇರಿ ಭಾರಿಸಿತ್ತು. ಒಂದು ವೇಳೆ ಎನ್‍ಸಿಪಿ, ಆಪ್, ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ ಬಿಜೆಪಿಗೆ ಭಾರೀ ಪೈಪೋಟಿ ಸಿಗುವ ಸಾಧ್ಯತೆ ಇತ್ತು.

RAHUL

3. ಮತದಾರರ ಧ್ರುವೀಕರಣ ಮಾಡುವ ಸಾಮರ್ಥ್ಯ
2001 ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಗೋಧ್ರಾ ಹತ್ಯಾಕಾಂಡ ನಡೆದಿತ್ತು ಅದರಲ್ಲಿ 59 ಮಂದಿ ಸಾವನ್ನಪ್ಪಿದರು. ನಂತರ ನಡೆದ ಗೋಧ್ರೋತ್ತರ ದಂಗೆ ವೇಳೆ 1200ಕ್ಕೂ ಜನರ ಹತ್ಯೆ ನಡೆಯಿತು. ಈ ವೇಳೆ ಬಂದಂತಹ ಸಬರಮತಿ ಹಾಗೂ ಸಬರ್ಕಾಂತ್ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತು. ಇದಾದ ಬಳಿಕ ಗುಜರಾತ್ ರಾಜಕೀಯ ಮತ್ತು ಸಮಾಜವು ಈ ಕೋಮು ಗಲಭೆ ಉದ್ದಕ್ಕೂ ಧ್ರುವೀಕರಣಗೊಳ್ಳುತ್ತಾ ಹೋಯಿತು. 2002ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 183 ಸ್ಥಾನಗಳ ಪೈಕಿ 127ರಲ್ಲಿ ಬಿಜೆಪಿ ಜಯಗಳಿಸಿತು. ಗಲಭೆಗಳ ಮುಂಚೆ ಅಷ್ಟೊಂದು ಪ್ರಭಾವಿಯಾಗಿರದ ಬಿಜೆಪಿ ನಂತರ ಹಿಂದೂ ಮತಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದರ ಜೊತೆಗೆ ಮೋದಿ ಅಭಿವೃದ್ಧಿ ಮಂತ್ರ ಕೆಲಸ ಮಾಡಿತ್ತು. ಇದೆಲ್ಲದರ ಪರಿಣಾಮ 2007 ಮತ್ತು 2012ರ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿ ಗದ್ದುಗೆ ಏರಿತ್ತು.

ಮೂರು ಚುನಾವಣೆಗಳನ್ನು ಅವಲೋಕಿಸಿದಾಗ ಹಿಂದುತ್ವ ಧ್ರುವೀಕರಣ ರಾಜಕೀಯ ಮತ್ತು ಅಭಿವೃದ್ಧಿ ಮಂತ್ರಗಳನ್ನು ಮುಂದಿಟ್ಟು ಜನರನ್ನು ಸೆಳೆಯುಯವ ಬಿಜೆಪಿ ತಂತ್ರಗಾರಿಕೆ ಯಶಸ್ಸು ಕಂಡಿರುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಈ ಚುನವಾವಣೆಯಲ್ಲೂ ಬಿಜೆಪಿ ಈ ತಂತ್ರಗಾರಿಕೆಯನ್ನು ಮುಂದುವರಿಸುತ್ತಿದೆ. ಹೀಗಾಗಿ ಈ ತಂತ್ರಗಾರಿಕೆಗೆ ಕಾಂಗ್ರೆಸ್ ಪ್ರತಿತಂತ್ರ ಬಳಸಿ ಹೇಗೆ ಮತದಾರರನ್ನು ಸೆಳೆಯಬಹುದು ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.

 

 

 

 

rahul gandhi 3

SARDAR SAROVER DAM 7 2

SARDAR SAROVER DAM 6 2

SARDAR SAROVER DAM 4 2

SARDAR SAROVER DAM 3 2

SARDAR SAROVER DAM 2 2

SARDAR SAROVER DAM 1 2

Share This Article
Leave a Comment

Leave a Reply

Your email address will not be published. Required fields are marked *