ಚಿತ್ರದುರ್ಗ: ನಗರಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯೊಬ್ಬ ಪೊಲೀಸರಿಗೆ ಧಮ್ಕಿ ಹಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
22ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಬಾಬು ಪೋಲಿಸರಿಗೆ ಧಮ್ಕಿ ಹಾಕಿದ್ದಾರೆ. ಇಂದು ನಗರಸಭೆಯ 35 ವಾರ್ಡ್ ಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಹಿನ್ನೆಲೆಯಲ್ಲಿ ಬಾಲವಭವನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ಬಾಬು ನಾಮಪತ್ರ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಅಭ್ಯರ್ಥಿ ಜೊತೆಗೆ ಕೇವಲ ನಾಲ್ವರಿಗೆ ಮಾತ್ರ ಅವಕಾಶ ನೀಡಬೇಕು ಎಂಬ ನಿಯಮವಿತ್ತು. ಆದರೆ ಅಭ್ಯರ್ಥಿ ಬಿಟ್ಟು ಅವರ ಹೆಸರು ಹೇಳಿಕೊಂಡು ನಾಲ್ವರು ಒಳಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗು ಹಿರಿಯ ಮಾಜಿ ನಗರಸಭಾ ಸದಸ್ಯ ರವಿಶಂಕರ್ ಬಾಬು ಅವರ ಪ್ರವೇಶಕ್ಕೆ ಪೊಲೀಸರು ನಿರಾಕರಿಸಿದ್ದಾರೆ. ಹೀಗಾಗಿ ಆಕ್ರೋಶಗೊಂಡ ರವಿ ಶಂಕರ್ ಬಾಬು, ಬಡಾವಣೆ ಠಾಣೆ ಪಿಎಸೈ ರಘುನಾಥ್ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಮೂರು ಬಾರಿ ಸ್ಪರ್ಧೆ ಮಾಡಿ ಗೆದ್ದು, ನಗರಸಭಾ ಸದಸ್ಯನಾಗಿರುವ ನನಗೆ ರೂಲ್ಸ್ ಹೇಳಿಕೊಡುತ್ತೀಯಾ ಅಂತ ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗನೊಬ್ಬ ನಾಮಪತ್ರ ಸಲ್ಲಿಕೆ ಕೊಠಡಿಯಿಂದ ಹೊರಬಂದು, ಪೊಲೀಸ್ ಮತ್ತು ರವಿಶಂಕರ್ ಮಧ್ಯೆ ನಡೆಯುತ್ತಿದ್ದ ವಾದವನ್ನು ನಿಲ್ಲಿಸಿ ಅಭ್ಯರ್ಥಿಯನ್ನು ಒಳಗೆ ಕಳುಹಿಸಿ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv