ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರು ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗೋಳೋ ಅಂತಾ ಕಣ್ಣೀರಿಟ್ಟಿದ್ದಾರೆ.
ನನಗೆ ಈಗ ರಾಜಕೀಯಕ್ಕೆ ಬಂದು ತಪ್ಪು ಮಾಡಿದೆ ಅಂತ ಅನ್ನಿಸುತ್ತಿದೆ. ನಾನು ಮೂರನೇ ಬಾರಿಗೆ ಈ ಚುನಾವಣೆಯಲ್ಲಿ ಸೋತಿದ್ದೇನೆ. ಕಳೆದ 10 ವರ್ಷಗಳಿಂದ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದ್ದಕ್ಕೆ ಇದು ನೀವು ಕೊಟ್ಟ ಬಹುಮಾನವಾ ಎಂದು ಪ್ರಶ್ನಿಸಿ ಕಣ್ಣೀರಿಟ್ಟಿದ್ದಾರೆ.
Advertisement
ಚುನಾವಣೆಯಿಂದ ನನ್ನ ಮನೆ ಬೀದಿಗೆ ಬಂದಿದೆ. ನನ್ನ ನೆರವಿಗೆ ಪಕ್ಷ ಬರಲೇ ಇಲ್ಲ. ಚುನಾವಣೆಯಲ್ಲಿ ನಾನು ನನ್ನ ಆಸ್ತಿ, ಮನೆಯಲ್ಲಿನ ಬಂಗಾರ ಕಳೆದು ಕೊಂಡಿದ್ದೇನೆ. ಕಾಂಗ್ರೆಸ್ ನ ಮಾಜಿ ಶಾಸಕ ಎಚ್.ಪಿ ಮಂಜುನಾಥ್ ಮೂರೂವರೆ ಲಕ್ಷ ರೂಪಾಯಿ ಕೊಟ್ಟರು. ಮಾಜಿ ಶಾಸಕ ವೆಂಕಟೇಶ್ 2 ಲಕ್ಷ ಕೊಟ್ಟರು. ಇಷ್ಟು ಬಿಟ್ಟರೆ ಇನ್ಯಾರು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ದುಃಖದಿಂದ ಹೇಳಿದ್ದಾರೆ.
Advertisement
ನನ್ನ ಕುಟುಂಬ ಹೇಗೆ ನಿರ್ವಹಣೆ ಮಾಡಬೇಕು ಎಂಬ ಚಿಂತೆ ನನ್ನ ಮುಂದಿದೆ. ಚುನಾವಣೆಯಿಂದ ನಾನು ಬೀದಿಗೆ ಬಂದಿದ್ದೇನೆ. ನಾನು ಸಹಾಯ ಮಾಡಿದವರೇ ನನ್ನ ವಿರುದ್ಧ ಪ್ರಚಾರ ಮಾಡಿ ನನ್ನನ್ನು ಸೋಲಿಸಿದರು ಎಂದು ಗೋಳಿಟ್ಟರು. ಇನ್ನೂ ಯಾವತ್ತೂ ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೊನೆಗೆ ಕಣ್ಣೀರಿಡುತ್ತಲೆ ಮಂಡಿಯೂರಿ ತಮಗೆ ಮತ ಹಾಕಿದವರಿಗೆ ಹಾಗೂ ಹಾಕದವರಿಗೆ ನಮಸ್ಕಾರ ಹಾಕಿದ್ದಾರೆ.
Advertisement