Connect with us

Bengaluru City

ಬಳ್ಳಾರಿ, ಶಿವಮೊಗ್ಗ ಗೆಲುವಿಗಾಗಿ ಪಕ್ಷಗಳು ಹರಿಸಲಿವೆ ಹಣದ ಹೊಳೆ

Published

on

ಬೆಂಗಳೂರು: ಕರ್ನಾಟಕದಲ್ಲಿ ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳಿಗೆ ನವೆಂಬರ್ 3ರಂದು ಚುನಾವಣೆ ನಡೆಯಲಿದೆ. ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು. ಚುನಾವಣಾ ಅಖಾಡ ರಣರಂಗವಾಗುತ್ತಿದೆ. ಮೈತ್ರಿ ಸರ್ಕಾರ ವರ್ಸಸ್ ಬಿಜೆಪಿ ಅಂತಾ ಆಗಿರುವ ಚುನಾವಣೆಯನ್ನು ಗೆಲ್ಲಲು ಮೂರು ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿವೆ. ಆದ್ರೆ ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರಗಳ ಜಿದ್ದಾಜಿದ್ದಿನ ಆಟ ರಾಜಕೀಯದಲ್ಲಿ ರಣಕಹಳೆಯನ್ನು ಮೊಳಗಿಸುತ್ತಿದೆ.

ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಶಿವಮೊಗ್ಗ ಮತ್ತು ಬಳ್ಳಾರಿಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭಾರೀ ಚಕ್ರವ್ಯೂಹವನ್ನೇ ರಚಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿ ಹೊರ ಹೊಮ್ಮಿದೆ. ಇತ್ತ ಶಾಸಕ ಶ್ರೀರಾಮುಲು ಸಹ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಲು ಸಜ್ಜಾಗಿದ್ದಾರಂತೆ.

ಇತ್ತ ಶಿವಮೊಗ್ಗವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮೈತ್ರಿ ಸರ್ಕಾರ ಮಾಜಿ ಸಿಎಂ ಯಡಿಯೂರಪ್ಪರ ಪುತ್ರ ಬಿ.ವೈ.ರಾಘವೇಂದ್ರರನ್ನು ಸೋಲಿಸಿ ಬಿಜೆಪಿಗೆ ಮುಖಭಂಗ ಮಾಡಲು ರಾಜಕೀಯ ರೂಪರೇಷಗಳನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ರೂಪಿಸುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಾತಾಗಿದ್ದು, ನಾಲ್ವರು ಘಟಾನುಘಟಿಗಳ ನಡುವಿನ ಪ್ರತಿಷ್ಠೆಯ ಸಮರ ಎಂದೇ ಉಪಕದನವನ್ನು ವರ್ಣಿಸಲಾಗುತ್ತಿದೆ. ನಾಯಕರಿಗೆ 4 ತಿಂಗಳ ಆಧಿಕಾರವಧಿಗಿಂತ ಪ್ರತಿಷ್ಠೆ ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಹಣದ ಹೊಳೆಯೇ ಹರಿಸಲು ಮುಂದಾಗಿದೆಯಂತೆ.

ಬಳ್ಳಾರಿಗಾಗಿ ಬರೋಬ್ಬರಿ 200 ಕೋಟಿ!
ಬಳ್ಳಾರಿ ಲೋಕಸಭಾ ಕ್ಷೇತ್ರದ ಗೆಲುವಿಗಾಗಿ ಕಾಂಗ್ರೆಸ್ ಬರೋಬ್ಬರಿ 300 ಕೋಟಿ ರೂ. ಹಣವನ್ನು ವಿನಿಯೋಗಿಸಲಿದೆಯಂತೆ. ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪರಿಗೆ ಡಿ.ಕೆ.ಶಿವಕುಮಾರ್ ಮನಿ ಟ್ರೀ (ಹಣದ ಮೂಲ) ಆದ್ರೆ, ಬಿಜೆಪಿ ಅಭ್ಯರ್ಥಿ ಜೆ.ಶಾಂತಾರ ಪರವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಸೋದರ ಶ್ರೀರಾಮುಲು ಹಣದ ಹೊಳೆ ಹರಿಸಲಿದ್ದಾರೆ ಎಂಬ ಮಾತುಗಳು ಬಳ್ಳಾರಿ ರಾಜಕಾರಣದಲ್ಲಿ ಕೇಳಿ ಬರುತ್ತಿರುವೆ. ಬಳ್ಳಾರಿ 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ 25 ಕೋಟಿಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಖರ್ಚು ಮಾಡಲಿದೆಯಂತೆ.

ಶಿವಮೊಗ್ಗಕ್ಕಾಗಿ 100 ಕೋಟಿ!
ಒಂದು ವೇಳೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೋತರೆ ಯಡಿಯೂರಪ್ಪರಿಗೆ ಭಾರೀ ಮುಖಭಂಗವಾಗಲಿದೆ. ಇತ್ತು ಜೆಡಿಎಸ್ ನಿಂದ ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಬಿಜೆಪಿಯ ಎದುರಾಳಿ ಆಗಿದ್ದಾರೆ. ಮಧು ಬಂಗಾರಪ್ಪ ಅವರಿಗೆ ಸಿಎಂ ಕುಮಾರಸ್ವಾಮಿ ಮನಿ ಟ್ರೀ ಆದ್ರೆ, ಬಿ.ವೈ.ರಾಘವೇಂದ್ರರಿಗೆ ತಂದೆ ಬಿ.ಎಸ್.ಯಡಿಯೂರಪ್ಪ ಮನಿ ಟ್ರೀ ಎಂದು ಹೇಳಲಾಗುತ್ತಿದೆ. ಶಿವಮೊಗ್ಗದ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಗೆ ತಲಾ 12.50 ಕೋಟಿ ಖರ್ಚಿಗೆ ಬಿಜೆಪಿ ಮತ್ತು ಜೆಡಿಎಸ್ ಪ್ಲಾನ್ ಮಾಡಿದೆಯಂತೆ. ಒಟ್ಟು 8 ಕ್ಷೇತ್ರಗಳಿಗೆ 100 ಕೋಟಿ ರೂ.ಖರ್ಚು ಆಗಲಿದೆ ಎಂಬ ಸುದ್ದಿಯೂ ಶಿವಮೊಗ್ಗ ರಾಜಕೀಯದ ಪಡಸಾಲೆಯನ್ನು ಹರಿದಾಡುತ್ತಿವೆ.

ನಾಲ್ಕು ತಿಂಗಳ ಅವಧಿಗಿಂತ ಪ್ರತಿಷ್ಠೆಯ ಕಣವಾಗಿ ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳು ಏರ್ಪಟ್ಟಿವೆ. ಕರ್ನಾಟಕ ಉಪ ಚುನಾವಣೆಯನ್ನು 2019ರ ಎಲೆಕ್ಷನ್ ಗೆ ದಿಕ್ಸೂಚಿ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *