ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಿಡಿದು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿಯವರ ರಾಜೀನಾಮೆ ಕಾಂಗ್ರೆಸ್‍ಗೆ ದೊಡ್ಡ ಆಘಾತವನ್ನೇ ನೀಡಿತ್ತು. ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಹಿಂದೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಇದ್ದರಾ ಎಂಬ ಅನುಮಾನವೊಂದು ಹುಟ್ಟುಕೊಂಡಿದೆ.
ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ಬಿಜೆಪಿ ಯಲಹಂಕ ಫೇಸ್ ಬುಕ್ ಅಕೌಂಟ್‍ನಲ್ಲಿ ಎಸ್.ಆರ್ ವಿಶ್ವನಾಥ್ ಅವರಿಗೆ ಕಾರ್ಯಕರ್ತರಿಂದ ಅಭಿನಂದನೆ ಸ್ಟೇಟಸ್ ಹಾಕಲಾಗಿದೆ. ಈ ಪೋಸ್ಟ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅರವಿಂದ ಲಿಂಬಾವಳಿ ಸೂಚನೆ ಮೆರೆಗೆ ರಾಮಲಿಂಗರೆಡ್ಡಿಯವರಿಂದ ರಾಜೀನಾಮೆ ಕೊಡಿಸಲು ಯಶಸ್ವಿಯಾದ ಶಾಸಕ ಎಸ್.ಆರ್ ವಿಶ್ವನಾಥ್‍ಗೆ ಅಭಿನಂದನೆ ಎಂದು ಬರೆಯಲಾಗಿದೆ.
ಇತ್ತ ಮುಂದಿನ ದಿನಗಳಲ್ಲಿ ಎಸ್.ಆರ್.ವಿಶ್ವನಾಥ್ ಅವರ ಮೂಲಕವೇ ರಾಮಲಿಂಗಾ ರೆಡ್ಡಿ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ನಾನು ಕೇವಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.