ಶುಭ ಶುಕ್ರವಾರದಂದು ಘಟಾನುಘಟಿ ನಾಯಕರ ನಾಮಪತ್ರ ಸಲ್ಲಿಕೆ – ರಂಗೇರಿದ ಚುನಾವಣಾ ಕಣ

Public TV
3 Min Read
nomination

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿ ಎರಡು ದಿನ ಕಳೆದ ಬಳಿಕ ಎಲ್ಲಾ ಪಕ್ಷಗಳ ಘಟಾನುಘಟಿ ನಾಯಕರು ಶುಭ ಶುಕ್ರವಾರ ದಂದು ನಾಮಪತ್ರ ಸಲ್ಲಿಸಿ ಚುನಾವಣಾ ಕಣ ರಂಗೇರುವಂತೆ ಮಾಡಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಾ ಪಕ್ಷಗಳು ಸಹ ಸಾಕಷ್ಟು ತಂತ್ರ, ಪ್ರತಿತಂತ್ರ ರೂಪಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದರು. ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದ್ದರೆ, ಇನ್ನು ಕೆಲ ಕ್ಷೇತ್ರಗಳ ಬಗ್ಗೆ ಗೊಂದಲ ಮುಂದುವರಿದಿದೆ. ಇದರ ನಡುವೆ ಟಿಕೆಟ್ ಪಡೆದ ಹಲವು ನಾಯಕರು ಹಾಗೂ ಟಿಕೆಟ್ ವಂಚಿತರು ಸೇರಿ ಹಲವರು ದೇವರ ಮೊರೆ ಹೋಗಿ ಇಂದು ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

siddaramaiah

ಪ್ರಮುಖವಾಗಿ ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಿಎಂ ಸಿದ್ದರಾಮಯ್ಯ ಅವರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಗೊಂದಲ ಮುಂದುವರಿದ್ದರೂ ಸಹ ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿ 1983 ರಲ್ಲಿ ಮೊದಲ ಬಾರಿಗೆ ನಾಮಪತ್ರ ಸಲ್ಲಿಸಿದ್ದಾಗ ನನಗೆ ಆತಂಕ ಇತ್ತು. ಈಗ ನನಗೆ ಯಾವುದೇ ಆತಂಕ ಇಲ್ಲ. ತುಂಬಾ ಸಮಾಧಾನದಿಂದ ಇದ್ದೇನೆ. ನನಗೆ ರಾಜಕೀಯದಲ್ಲಿ ಶತ್ರುಗಳು, ಹಿತ ಶತ್ರುಗಳು ಯಾರು ಇಲ್ಲ. ಕೇವಲ ರಾಜಕೀಯ ವಿರೋಧಿಗಳು ಇದ್ದಾರೆ ಅಷ್ಟೇ. ಚಾಮುಂಡೇಶ್ವರಿ ಜನ ನನಗೆ ಆಶೀರ್ವಾದಿಸುತ್ತಾರೆ ಎಂದರು.

ಬಾದಾಮಿ ಗೊಂದಲ: ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ್ದು, ಬಾದಾಮಿಯಲ್ಲಿ ಸ್ಪರ್ಧೆ ಮಾಡಲ್ಲ ಎಂದರೂ ಕ್ಷೇತ್ರದ ಜನರು ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ಬಾಗಲಕೋಟೆ, ವಿಜಯಪುರ ಜಿಲ್ಲೆಯವರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಈ ಕುರಿತು ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಮೈಸೂರಿನ ಮಾಧ್ಯಮ ಸಂವಾದಲ್ಲಿ ಹೇಳಿದರು. ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಹೈಕಮಾಂಡ್ ನಿರ್ಧಾರ ಮಾಡಲಿದೆ ಎನ್ನಲಾಗಿದೆ.

ಇದೇ ವೇಳೆ ಸಿದ್ದರಾಮಯ್ಯ ಅವರ ಪ್ರತಿ ಸ್ಪರ್ಧಿ ಜಿಟಿ ದೇವೇಗೌಡ ಮೊದಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದು ನಾಮಪತ್ರ ಸಲ್ಲಿಸಿದರು. ಇನ್ನು ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯತೀಂದ್ರ ನಾಮಪತ್ರ ಸಲ್ಲಿಸಿದರು. ಯತೀಂದ್ರ ಅವರಿಗೆ ಮಹದೇವಪ್ಪ ಪುತ್ರ ಸುನೀಲ್ ಭೋಸ್ ಸಾಥ್ ನೀಡಿದರು.

vlcsnap 2018 04 20 18h49m18s54

ಎಚ್‍ಡಿಕೆ, ರೇವಣ್ಣ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ರಾಮನಗರ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಾಮಪತ್ರ ಸಲ್ಲಿಸಿದರು. ಹಲವು ಕಾರಣಕ್ಕೆ ರಾಜ್ಯದ ಗಮನ ಸೆಳೆದಿರುವ ಹಾಸನ ಜಿಲ್ಲೆ ಹೊಳೆನರಸೀಪುರ ಕ್ಷೇತ್ರದಿಂದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ ಹೊಳೆನರಸೀಪುರ ಪಟ್ಟಣದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ನಾಮಪತ್ರ ಸಹಿತ ವಿಶೇಷ ಪೂಜೆ ಸಲ್ಲಿಸಿದ ರೇವಣ್ಣ ಹಾಗೂ ಕುಟುಂಬ ಸದಸ್ಯರು ನಂತರ ಬೃಹತ್ ಮೆರವಣಿಗೆಯಲ್ಲಿ ಬಂದು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಪುಟ್ಟಣ್ಣಯ್ಯ ಮಗ, ಪತ್ನಿ ಜಂಟಿಯಾಗಿ ನಾಮಪತ್ರ ಸಲ್ಲಿಕೆ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ರೈತಮುಖಂಡ ಪುಟ್ಟಣ್ಣಯ್ಯ ಅವರ ಪತ್ನಿ ಸುನೀತ ಪುಟ್ಟಣ್ಣಯ್ಯ ಮತ್ತು ಮಗ ದರ್ಶನ್ ಪುಟ್ಟಣ್ಣಯ್ಯ ಸ್ವರಾಜ್ ಇಂಡಿಯಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಅಪಾರ ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ಆಗಮಿಸಿ ತಾಯಿ ಮಗ ಇಬ್ಬರು ನಾಮಪತ್ರ ಸಲ್ಲಿಸಿದರು. ಮಗ ದರ್ಶನ್ ಅಮೇರಿಕಾದಿಂದ ವಾಪಸ್ಸಾಗಿದ್ದು, ನಾಮಪತ್ರದಲ್ಲಿ ಏನಾದ್ರು ಸಮಸ್ಯೆ ಆದರೆ ತೊಂದರೆಯಾಗಬಾರದು ಎಂದು ನಾನು ಕೂಡ ನಾಮಪತ್ರ ಸಲ್ಲಿಸಿದ್ದೇನೆ ಎಂದು ದರ್ಶನ್ ತಾಯಿ ಸುನೀತ ಪುಟ್ಟಣ್ಣಯ್ಯ ತಿಳಿಸಿದ್ದಾರೆ.

vlcsnap 2018 04 20 18h50m44s165

ಸಚಿವ ವಿನಯ ಕುಲಕರ್ಣಿ ಧಾರವಾಡ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಉಮ್ಮೇದುವಾರಿಕೆಯನ್ನ ಸಲ್ಲಿಸಿದ್ರೆ, ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಅರವಿಂದ ಬೆಲ್ಲದ ನಾಮಪತ್ರ ಸಲ್ಲಿಸಿದರು. ನವಲಗುಂದ ಮತಕ್ಷೇತ್ರದ ಜೆಡಿಎಸ್ ಶಾಸಕ ಎನ್ ಎಚ್ ಕೋನನರಡ್ಡಿ ಅವರು ಚಕ್ಕಡಿ ಏರಿ ಮೆರವಣಿಗೆ ಮೂಲಕ ಆಗಮಿಸಿ ನವಲಗುಂದ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ ಟಿ ಪರಮೇಶ್ವರ್ ನಾಯ್ಕ್ ನಾಮಪತ್ರ ಸಲ್ಲಿಸಿದರು.

ಸಚಿವ ಆರ್ ವಿ ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಕಲಬುರಗಿ ಜಿಲ್ಲೆ ಅಫಜಲಪುರದ ಕ್ಷೇತ್ರಕ್ಕೆ ಬಿಎಸ್ ಯಡಿಯೂರಪ್ಪ ಜೊತೆ ಬಂದ ಮಾಲೀಕಯ್ಯ ಗುತ್ತೇದಾರ್ ನಾಮಪತ್ರ ಸಲ್ಲಿಸಿದರು. ಚಿಕ್ಕಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಸುಧಾಕರ್ ದೇವರುಗಳ ಮೊರೆ ಹೋಗಿ ಬೆಳಿಗ್ಗೆಯಿಂದಲೇ ಪೂಜೆ ಸಲ್ಲಿಸಿದರು. ಹಲವು ದೇವಾಲಯ ಹಾಗೂ ಚರ್ಚ್ ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಉಪವಿಭಾಗಾಧಿಕಾರಿಗಳ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

 

uma sri

Share This Article
Leave a Comment

Leave a Reply

Your email address will not be published. Required fields are marked *