– ಬಿಜೆಪಿ ತೆಕ್ಕೆಗೆ ಹೊಸನಗರ ತಾ.ಪಂ
ಶಿವಮೊಗ್ಗ: ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲೆಯ ಹೊಸನಗರ ತಾಲೂಕು ಪಂಚಾಯತಿಗೆ ನೂತನ ಅಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಡೆದಿದ್ದು, ಬಿಜೆಪಿಯ ಆಲುವಳ್ಳಿ ವೀರೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಬಿಜೆಪಿಯ ವಾಸಪ್ಪಗೌಡರು ಈ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ವಾಸಪ್ಪಗೌಡರ ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಬೆಳಿಗ್ಗೆ 10.30ಕ್ಕೆ ತಾಪಂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿತ್ತು. ಬಿಜೆಪಿಯಿಂದ ವೀರೇಶ್ ಆಲುವಳ್ಳಿ, ಕಾಂಗ್ರೆಸ್ಸಿನಿಂದ ಕೋಡೂರಿನ ಬಿ.ಜಿ.ಚಂದ್ರಮೌಳಿಗೌಡ ಪ್ರತಿಸ್ಪರ್ಧಿಗಳಾಗಿದ್ದರು. 12 ಜನ ಸದಸ್ಯರಲ್ಲಿ 7 ಜನ ಸದಸ್ಯರು ಬಿಜೆಪಿಯ ಆಲುವಳ್ಳಿ ವೀರೇಶ್‍ಗೆ ಮತಹಾಕಿದ್ದು, 5 ಜನ ಸದಸ್ಯರು ಕಾಂಗ್ರೆಸ್‍ನ ಬಿ.ಜಿ ಚಂದ್ರಮೌಳಿಗೌಡ ಅವರಿಗೆ ಬೆಂಬಲ ಸೂಚಿಸಿದರು.
Advertisement
Advertisement
ಸದಸ್ಯರು ನೀಡಿದ ಭರ್ಜರಿ ಮತದಿಂದ ವೀರೇಶ್ ಅಧ್ಯಕ್ಷರಾಗಿ ಆಯ್ಕೆಯಾದರು. ಈವರೆಗೆ ಇದ್ದ ಕಾಂಗ್ರೆಸ್‍ನ ಸುಶೀಲಮ್ಮ ರಘುಪತಿ ಅವರು ಉಪಾಧ್ಯಕ್ಷರಾಗಿ ಮುಂದುವರಿದಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ನೂತನ ಅಧ್ಯಕ್ಷರಿಗೆ ಹಾರ ಹಾಕಿ ಶುಭಕೋರಿದರು.
Advertisement
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟುವಂತಿತ್ತು. ಬಿಜೆಪಿಯಿಂದ ಗೆದ್ದು ಕಾಂಗ್ರೆಸ್ ಸಹಕಾರದಿಂದ ಅಧ್ಯಕ್ಷರಾಗಿದ್ದ ವಾಸಪ್ಪಗೌಡ, ಈ ಬಾರಿ ಕಾಂಗ್ರೆಸ್‍ನವರಿಗೆ ಬೆಂಬಲ ಕೊಡುತ್ತಾರೆ ಎಂದು ಕಾಂಗ್ರೆಸ್‍ನವರು ನಂಬಿಕೊಂಡಿದ್ದರು. ಆದರೆ ವಾಸಪ್ಪಗೌಡ ಬಿಜೆಪಿಗೆ ಬೆಂಬಲ ಸೂಚಿಸಿದ್ದಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಘರ್ಷಣೆಯನ್ನು ತಡೆದು ಎರಡು ಪಕ್ಷದ ಕಾರ್ಯಕರ್ತರನ್ನು ಚದುರಿಸಿದರು.