– ಕರ್ನಾಟಕ ಕಣ್ಣೀರು ಮುಕ್ತ ರಾಜ್ಯವಾಗಬೇಕು
– ದೇವೇಗೌಡರ ಕುಟುಂಬದವರ ಕಣ್ಣೀರು ಬತ್ತಲ್ಲ
ದಾವಣಗೆರೆ: ಮೋದಿ ಅವರು ದಿನದ 20 ಗಂಟೆ ಕೆಲಸ ಮಾಡುವ ಪ್ರಧಾನಿ. ಆದ್ರೆ ನಮ್ಮ ಕಾಂಗ್ರೆಸ್ ನಾಯಕರು ಮಧ್ಯಾಹ್ನ ಎದ್ದು ಕಣ್ಣೊರೆಸಿಕೊಂಡು ಬರುತ್ತಾರೆ ಎಂದು ಬಿಜೆಪಿ ನಾಯಕ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ.
ರೇಣುಕಾ ಮಂದಿರದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಏನೇ ಕೆಲಸ ಇರಲಿ ಅವರು ಏಳುವುದು ಮಧ್ಯಾಹ್ನ 12 ಗಂಟೆಗೆ. ಅವರು ಪ್ರಧಾನಿ ಬಗ್ಗೆ ಮಾತನಾಡುತ್ತಾರೆ. ಅವರು ಯಾರು ಎನ್ನುವುದು ಜಿಲ್ಲೆಯ ಜನತೆಗೆ ಗೊತ್ತಿದೆ. ಮಧ್ಯಾಹ್ನದ ವರೆಗೂ ಮಲಗುವವರು ರಾತ್ರಿಯಲ್ಲಿ ಏನ್ ಕಡೆದು ಕಟ್ಟೆ ಹಾಕ್ತಾರೆ ಎಂದು ಪ್ರಶ್ನಿಸಿ ಹೆಸರು ಹೇಳದೇ ಶಾಮನೂರು ಹಾಗೂ ಅವರ ಮಕ್ಕಳಿಗೆ ಟಾಂಗ್ ನೀಡಿದ್ದಾರೆ.
ನರೇಂದ್ರ ಮೋದಿ ಶ್ರೀಮಂತರ ಮಗನಲ್ಲ. ಕೂಲಿ ಕಾರ್ಮಿಕನ ಮಗ. ಆದರೆ ಈಗ ದೇಶದ ಪ್ರಧಾನಿಯಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಸಮಾರಂಭಕ್ಕೆ ಹೋದ್ರೂ ನಿದ್ದೆ ಮಾಡಿಕೊಂಡೇ ಇರುತ್ತಾರೆ. ಶಾಲೆಯಲ್ಲಿ ಮಾಸ್ಟರ್ ನಿದ್ದರಾಮಯ್ಯ ಅಂತ ಬರಿಯೋದು ಬಿಟ್ಟು ಸಿದ್ದರಾಮಯ್ಯ ಅಂತ ಬರೆದುಬಿಟ್ಟಿದ್ದಾರೆ. ಮಧ್ಯಾಹ್ನದವರೆಗೂ ಮಲಗುವ ಅವರನ್ನು ಸೋಲಿಸಿ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿನ ಶಾಮನೂರು ಹಾಗೂ ಮಲ್ಲಿಕಾರ್ಜುನ್‍ರನ್ನು ಸೋಲಿಸಿ ಎಂದು ಕಾರ್ಯಕರ್ತರಿಗೆ ಆಯನೂರು ಕರೆ ಕೊಟ್ಟಿದ್ದಾರೆ.
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರಷ್ಟು ಕಾಂಗ್ರೆಸ್ ಪಕ್ಷ ದುರ್ಬಲವಾಗಿದೆ. ಕಾಂಗ್ರೆಸ್ ಪಕ್ಷವನ್ನು ಯಾರಾದ್ರೂ ಕೈ ಹಿಡಿದು ನಡೆಸುವ ದುಸ್ಥಿತಿಗೆ ತಲುಪಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷದ ಸಚಿವರೇ ಒಬ್ಬರಿಗೊಬ್ಬರು ಆಪಾದನೆ ಮಾಡುತ್ತಿದ್ದಾರೆ. ಶಾಮನೂರು ಕುಟುಂಬ ವಿರುದ್ಧ ಎಂ.ಬಿ ಪಾಟೀಲ್, ಎಂಬಿ ಪಾಟೀಲ್ ವಿರುದ್ಧ ಶಾಮನೂರು ಶಿವಶಂಕರಪ್ಪ ಕುಟುಂಬ. ಬಹಿರಂಗವಾಗಿ ಅವರು ಎಷ್ಟು ಹೊಡೆದು ತಿಂದರು. ಇವರೆಷ್ಟು ಹೊಡೆದು ತಿಂದರು ಎಂದು ಹೇಳುತ್ತಾರೆ. ಹೊಡೆದು ಆಸ್ತಿ ಮಾಡಿಕೊಳ್ಳುವರ ವಿರುದ್ಧ ಅವರೇ ಹೇಳಿಕೊಳ್ಳುತ್ತಾರೆ. ಇವರಿಂದ ದೇಶ ಉಳಿಸಲು ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಿ. ದೇಶವನ್ನು ಕಾಂಗ್ರೆಸ್ ಮುಕ್ತ ಭಾರತದಂತೆ, ಕರ್ನಾಟಕವನ್ನು ಕಣ್ಣೀರು ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂದು ಹೇಳುವ ಮೂಲಕ ದೇವೇಗೌಡರ ಕುಟುಂಬಕ್ಕೆ ಆಯನೂರು ಟಾಂಗ್ ನೀಡಿದರು.
ಕಾವೇರಿಯಲ್ಲಿ ನೀರು ಬತ್ತಬಹುದು ಆದ್ರೆ ದೇವೇಗೌಡರ ಕುಟುಂಬದವರ ಕಣ್ಣಲ್ಲಿ ನೀರು ಬತ್ತೋದಿಲ್ಲ. ಹಾಸನದಲ್ಲಿ ಹೋಲ್ ಸೇಲ್ ಆಗಿ ಕಣ್ಣೀರು ಹಾಕಿದ್ರು. ಕುಮಾರಸ್ವಾಮಿ ನನ್ನನ್ನು ಮುಖ್ಯಮಂತ್ರಿ ಮಾಡಿ ಇಲ್ಲ ಸಾಯುತ್ತೇನೆ ಎಂದರು. ದೇಶದ ಇತಿಹಾಸದಲ್ಲಿ ಇದೇ ಮೊದಲು ಮುಖ್ಯಮಂತ್ರಿ ಮಾಡಿ ಇಲ್ಲ ಸಾಯುತ್ತೇನೆ ಎಂದಿರುವುದು ಎದು ದೇವೇಗೌಡರ ಕುಟುಂಬವನ್ನು ಆಯನೂರು ಮಂಜುನಾಥ್ ಲೇವಡಿ ಮಾಡಿದರು.