ಬೆಳಗಾವಿ (ಚಿಕ್ಕೋಡಿ): ಆಪರೇಷನ್ ಕಮಲ ವಿಫಲವಾದ ಬೆನ್ನಲ್ಲೇ ಮುಂಬೈನಿಂದ ರಾತ್ರೋರಾತ್ರಿ ಕ್ಷೇತ್ರಕ್ಕೆ ಆಗಮಿಸಿದ್ದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಮತ್ತೆ ದಿಢೀರ್ ನಾಪತ್ತೆಯಾಗಿದ್ದಾರೆ.
ಶಾಸಕ ಮಹೇಶ್ ಕುಮಟಳ್ಳಿ ಅವರು ಕಾಂಗ್ರೆಸ್ ಶಾಸಕಾಂಗ ಸಭೆಗೂ ಹಾಜರಾಗದೇ, ಕ್ಷೇತ್ರದ ಜನರಿಗೂ ಸಿಗದೆ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಬಳಿಕ ಆಪರೇಷನ್ ಕಮಲ ವಿಫಲವಾಗಿದ್ದರಿಂದ ನಾಲ್ಕು ದಿನಗಳ ಹಿಂದೆಯಷ್ಟೇ (ಜನವರಿ 25ರಂದು) ರಾತ್ರಿ ಅಥಣಿ ಪಟ್ಟಣದ ಅಬ್ದುಲ್ ಕಲಾಂ ಪದವಿ ಪೂರ್ವ ಕಾಲೇಜಿನಲ್ಲಿ ಕಾಣಿಸಿಕೊಂಡಿದ್ದರು. ಆಗ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಅವರು, ನನಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮುಂಬೈಗೆ ತೆರಳಿದ್ದೆ ಅಂತ ತಿಳಿಸಿದ್ದರು.
ಮಹೇಶ್ ಕುಮಠಳ್ಳಿ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಶಾಸಕರು ಮುಂಬೈನಿಂದ ವಾಪಸ್ ಬಂದು, ಕೇವಲ ನಾಲ್ಕು ದಿನ ಕ್ಷೇತ್ರದಲ್ಲಿದ್ದು ಮತ್ತೆ ನಾಪತ್ತೆಯಾಗಿದ್ದಾರೆ. ಅವರ ಈ ನಡೆ ರಾಜಕೀಯ ವಲಯದಲ್ಲಿ ಹಾಗೂ ಕ್ಷೇತ್ರದ ಜನರ ಚರ್ಚೆಗೆ ಗ್ರಾಸವಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಎಲ್ಲಿಯೂ ಹೋಗುವುದಿಲ್ಲ ಅಂತ ಹೇಳಿದ್ದ ಮಹೇಶ್ ಕುಮಠಳ್ಳಿ ಅವರು, ಕ್ಷೇತ್ರದ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸುತ್ತಿಲ್ಲ. ಅವರು ಮತ್ತೆ ಮಹಾರಾಷ್ಟ್ರಕ್ಕೆ ತೆರಳಿದ್ದು ಕೂತುಹಲ ಕೆರಳಿಸಿದೆ ಎಂದು ಕ್ಷೇತ್ರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv