ಬೆಂಗಳೂರು: ಹಣದ ವಿಚಾರವಾಗಿ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಹಾಗೂ ಬಾಗಲಗುಂಟೆ ವಾರ್ಡ್ ಅಧ್ಯಕ್ಷರಿಬ್ಬರೂ ಕ್ರಿಕೆಟ್ ವಿಕೆಟ್‍ಗಳಿಂದ ಬಡಿದಾಡಿಕೊಂಡಿದ್ದಾರೆ.
ನಗರದ ಹೆಗ್ಗನಹಳ್ಳಿಯಲ್ಲಿ ಘಟನೆ ನಡೆದಿದ್ದು, ರಾಜ್ಯ ಯೂತ್ ಕಾರ್ಯದರ್ಶಿ ಉಮೇಶ್ ಬೈರೇಗೌಡ ಬಾಗಲಗುಂಟೆ ವಾರ್ಡ್ ಅಧ್ಯಕ್ಷ ಜಗದೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಉಮೇಶ್ ಬೈರೇಗೌಡ ಹೆಗ್ಗನಹಳ್ಳಿಯಲ್ಲಿ ಅಕ್ಷಯ ಶ್ರೀ ಫೈನಾನ್ಸ್ ನಡೆಸುತ್ತಿದ್ದಾರೆ. ಫೈನಾನ್ಸ್ ಕಂಪನಿ ಮೂಲಕ ಚೀಟಿ ರೂಪದಲ್ಲಿ ಪ್ರತಿ ತಿಂಗಳು 30 ಸಾವಿರ ರೂಗಳಂತೆ 2 ವರ್ಷಗಳ ವರೆಗೆ ಜಗದೀಶ್ ಹಣ ಹೂಡಿಕೆ ಮಾಡಿದ್ದರು. 3 ವರ್ಷಗಳಿಂದ 30 ಸಾವಿರ ಪಾವತಿಸಿ ಚೀಟಿ ಮುಗಿದ ಬಳಿಕ ಒಟ್ಟು 9 ಲಕ್ಷ ರೂ. ಹಣ ಕೊಡುವಂತೆ ಜಗದೀಶ್ ಫೈನಾನ್ಸ್ ಕಛೇರಿ ಬಳಿ ತೆರಳಿದ್ದಾರೆ. ಈ ವೇಳೆ ವಾಗ್ವಾದ ನಡೆದು ಹಲ್ಲೆಗೆ ತಿರುಗಿದೆ.
ಚೀಟಿ ಕೊನೆಗೊಂಡು ಒಂದು ವರ್ಷ ಕಳೆದರೂ ಹಣ ಕೊಡದ್ದಕ್ಕೆ ಜಗದೀಶ್ ಸಿಟ್ಟಾಗಿದ್ದಾರೆ. ಈ ವೇಳೆ ವಾಗ್ವಾದ ನಡೆದಿದ್ದು, ಇಬ್ಬರೂ ಕ್ರಿಕೆಟ್ ವಿಕೆಟ್‍ಗಳಿಂದ ಬಡಿದಾಡಿಕೊಂಡಿದ್ದಾರೆ. ರಾಜಗೋಪಾಲ್ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಜಗದೀಶ್ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಂತರ ರಾಜಗೋಪಾಲನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.