ಕೋಲಾರ: ರಾಜ್ಯದಲ್ಲಿ ದೋಸ್ತಿ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಕೋಲಾರ – ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ(ಕೋಚಿಮುಲ್) ಚುನಾವಣೆಯ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.
ಕೋಲಾರ ನಗರದ ಗೋಕುಲ್ ಕಾಲೇಜಿನಲ್ಲಿ ಪ್ರತಿಷ್ಠಿತ ಕೋಚಿಮುಲ್ ನಿರ್ದೇಶಕರ ಚುನಾವಣೆ ನಡೆಯತ್ತಿದೆ. ಒಟ್ಟು 9 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಮತದಾನಕ್ಕೆ ಬಂದಿದ್ದ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಹಾಗೂ ಮಾಜಿ ಜೆಡಿಎಸ್ ಶಾಸಕ ಮಂಜುನಾಥ್ ಗೌಡ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಇದನ್ನೂ ಓದಿ:ಒಂದು ವೋಟಿಗೆ ಲಕ್ಷ ಲಕ್ಷ -ಕೋಚಿಮುಲ್ ಚುನಾವಣೆಯಲ್ಲೂ ರೆಸಾರ್ಟ್ ರಾಜಕೀಯ ಬಲು ಜೋರು
Advertisement
Advertisement
ಪ್ರವಾಸ, ರೆಸಾರ್ಟ್ ಮುಗಿಸಿ ಮತದಾನ ಮಾಡಲು ಮತದಾರರನ್ನು ಕರೆತಂದ ಕಾಂಗ್ರೆಸ್ ಶಾಸಕ ನಂಜೇಗೌಡರ ಕುಕ್ಕರ್ ಗುರುತಿಗೆ ಮತ ಎಂದು ಮಂಜುನಾಥ್ ಗೌಡ ಬೆಂಬಲಿಗರು ಕೆಣಕಿದ್ದಾರೆ. ಈ ವೇಳೆ ಎರಡು ಗುಂಪುಗಳ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಲಘುಲಾಠಿ ಚಾರ್ಜ್ ನಡೆಸಿ ಗುಂಪುಗಳನ್ನು ಚದುರಿಸಿದ್ದಾರೆ.
Advertisement
Advertisement
150ಕ್ಕೂ ಹೆಚ್ಚು ಮತದಾರರು ಪ್ರವಾಸ, ರೆಸಾರ್ಟ್ ಮುಗಿಸಿ ಮತದಾನ ಮಾಡಲು ಮೂರು ಬಸ್ಸಿನಲ್ಲಿ ಆಗಮಿಸಿದ್ದರು. ಗೋವಾ ಪ್ರವಾಸ ಮುಗಿಸಿ ಹಾಲು ಒಕ್ಕೂಟದ ಮತದಾರರು ಭಾನುವಾರ ಬೆಂಗಳೂರಿನ ಯಲಹಂಕದ ರೆಸಾರ್ಟ್ ಒಂದರಲ್ಲಿ ಬೀಡುಬಿಟ್ಟಿದ್ದರು. ಇಂದು ಮಾಲೂರು ಶಾಸಕ ನಂಜೇಗೌಡ ನೇತೃತ್ವದಲ್ಲಿ ನೇರವಾಗಿ ಮೂರು ಎಸ್‍ಆರ್‍ಎಸ್ ಬಸ್ಸುಗಳಲ್ಲಿ ಗೋಕುಲ್ ಕಾಲೇಜು ಬಳಿ ಮತಕೇಂದ್ರಕ್ಕೆ ಬಂದಿದ್ದರು.
ರಹಸ್ಯ ಕ್ಯಾಮೆರಾ ಬಳಸಿಕೊಂಡು ಮತ ಚಲಾವಣೆಗೆ ಮುಂದಾದ ನಾಲ್ವರು ಮತದಾರರು ಚುನಾವಣಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೋಚಿಮುಲ್ ಚುನಾವಣೆ ಹಿನ್ನೆಲೆ ಮತದಾನ ಮಾಡಿದ್ದನ್ನು ನಿರ್ದೇಶಕರಿಗೆ ತೋರಿಸಲು ಮತಕೇಂದ್ರಕ್ಕೆ ಪೆನ್ ಕ್ಯಾಮರಾ ತೆಗೆದುಕೊಂಡು ಹೋಗುತ್ತಿದ್ದ ನಾಲ್ಕು ಮಂದಿಯನ್ನು ಚುನಾವಣಾಧಿಕಾರಿಗಳು ಪೋಲೀಸರ ವಶಕ್ಕೆ ನೀಡಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಶ್ರೀನಿವಾಸರೆಡ್ಡಿ, ರಾಜಾರೆಡ್ಡಿ, ಮುನಿಯಪ್ಪ, ನಾರಾಯಪ್ಪ ಬಂಧಿತ ಆರೋಪಿಗಳಾಗಿದ್ದಾರೆ.