ಮೈಸೂರು: ಹುಣಸೂರು ಉಪಚುನಾವಣೆಯ ಮಾತಿನ ಸಮರದಲ್ಲಿ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಅವರನ್ನು ಕಟ್ಟಿ ಹಾಕುವುದು ಬಹುಸುಲಭ ಎಂದು ಕೈ, ತೆನೆ ನಾಯಕರು ಭಾವಿಸಿದ್ದರು. ವಿಶ್ವನಾಥ್ ವಿರುದ್ಧ ಅನರ್ಹಗಿಂತಾ ದೊಡ್ಡ ಅಸ್ತ್ರ ಬೇಕಾ? ಎನ್ನುವುದು ಕಾಂಗ್ರೆಸ್ ವಿಶ್ವಾಸಕ್ಕೆ ಕಾರಣ. ಆದರೆ, ಹಳ್ಳಿ ಹಕ್ಕಿ ಹಾಕಿದ ಒಂದು ಗ್ಲೂಗಿಗೆ ಕೈ ಪಾಳಯ ತತ್ತರಿಸಿದಂತೆ ಕಾಣುತ್ತಿದೆ.
ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ಹುಣಸೂರು ಚುನಾವಣಾ ಅಖಾಡಕ್ಕೆ ಇಳಿದ ಕೂಡಲೇ ಹುಣಸೂರು ಹೊಸ ಜಿಲ್ಲೆ ಮಾಡೇ ಮಾಡುತ್ತೇನೆ. ಇದು ನನ್ನ ಶಪಥ ಎಂದು ಘೋಷಿಸಿ ಬಿಟ್ಟರು. ವಿಶ್ವನಾಥ್ ಅವರ ಈ ಘೋಷಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಕ್ಕಾಬಿಕ್ಕಿಯಾಗಿ ಬಿಟ್ಟಿವೆ. ಚುನಾವಣೆ ಘೋಷಣೆಗೆ ಮುನ್ನ ಹುಣಸೂರು ಪ್ರತ್ಯೇಕ ಜಿಲ್ಲೆ ಬಗ್ಗೆ ಮಾತನಾಡಿದ್ದ ಎಚ್. ವಿಶ್ವನಾಥ್, ಚುನಾವಣಾ ಅಖಾಡಕ್ಕೆ ಇಳಿದ ದಿನವೇ ಈ ವಿಚಾರ ಮರು ಪ್ರಸ್ತಾಪಿಸಿ ಶಪಥ ಮಾಡಿ ಬಿಟ್ಟರು.
Advertisement
Advertisement
ವಿಶ್ವನಾಥ್ ಮಾಡಿದ ಈ ಶಪಥ ನೋಡಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಅಲ್ಲಿಯವರೆಗೂ ವಿಶ್ವನಾಥ್ ಅವರನ್ನು ಅನರ್ಹ ಶಾಸಕ ಎಂದಯ ಕ್ಷೇತ್ರದಲ್ಲಿ ಹೇಳುತ್ತಾ ಅವರ ವಿರುದ್ಧ ಸುಲಭವಾಗಿ ಜನಾಭಿಪ್ರಾಯ ರೂಪಿಸಬಹುದು ಎಂದುಕೊಂಡಿದ್ದ ಕಾಂಗ್ರೆಸ್, ಜೆಡಿಎಸ್‍ಗೆ ಈ ಶಪಥ ದೊಡ್ಡ ಏಟನ್ನು ನೀಡುತ್ತಿದೆ. ಎಚ್. ವಿಶ್ವನಾಥ್ ಎತ್ತಿರುವ ಪ್ರತ್ಯೇಕ ಜಿಲ್ಲೆ ಕೂಗಿಗೆ ಕಾಂಗ್ರೆಸ್, ಜೆಡಿಎಸ್ ವಿರೋಧ ವ್ಯಕ್ತಪಡಿಸಿದರೆ ಅದರಿಂದ ಆಗುವ ನಷ್ಟ ದೊಡ್ಡದಿದೆ. ಈ ಪ್ರಸ್ತಾಪಕ್ಕೆ ಧ್ವನಿಗೂಡಿಸಿದರೆ ಅದರಿಂದ ವಿಶ್ವನಾಥ್ ಹೆಚ್ಚು ಲಾಭವಾಗಲಿದೆ. ಹೀಗಾಗಿ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯದೇ ಕಕ್ಕಾಬಿಕ್ಕಿಯಾಗಿವೆ.
Advertisement
Advertisement
ಎಚ್. ವಿಶ್ವನಾಥ್ ತಮ್ಮ ಪ್ರತಿ ಪ್ರಚಾರದಲ್ಲೂ ಈ ಪ್ರತ್ಯೇಕ ಜಿಲ್ಲೆಯ ವಿಚಾರ ಪ್ರಸ್ತಾಪ ಮಾಡುತ್ತಾ ತಾನೂ ಗೆದ್ದರೆ ಮಾತ್ರ ಇದು ಸಾಧ್ಯ. ಇದು ಸಾಧ್ಯವಾದರೆ ಹುಣಸೂರಿನ ಅಭಿವೃದ್ಧಿ ಚಿತ್ರಣ ಬದಲಾಗುತ್ತೆ. ನಿಮಗೆ ಒಂದು ಜಿಲ್ಲೆಯಾದರೆ ದೊಡ್ಡ ಅನುಕೂಲ ಆಗುತ್ತೆ ಎಂದು ಜನರಲ್ಲಿ ಬಗೆಬಗೆಯ ಕನಸು ಬಿತ್ತುತ್ತಿದ್ದಾರೆ. ಜನರು ಮನದಲ್ಲಿ ಈ ಕನಸು ಉಳಿಯುತ್ತಿದೆ ಎಂಬುದು ನಿಧಾನವಾಗಿ ಸ್ಪಷ್ಟವಾಗುತ್ತಿರುವ ಕಾರಣ ಕಾಂಗ್ರೆಸ್, ಜೆಡಿಎಸ್ ನಾಯಕರು ಈ ‘ಗೂಗ್ಲಿ’ಗೆ ಪ್ರತಿಯಾಗಿ ಯಾವ ರೀತಿ ನಾವು ‘ಯಾರ್ಕರ್’ ಹಾಕಿ ವಿಶ್ವನಾಥ್ ಅವರನ್ನು ಕ್ಲೀನ್ ಬೌಲ್ಡ್ ಮಾಡಬಹುದು ಎಂದು ಚಿಂತಿಸುತ್ತಿದ್ದಾರೆ.
ಕಾಂಗ್ರೆಸ್ – ಜೆಡಿಎಸ್ ತಮ್ಮ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸುತ್ತವೆ ಎಂಬುದನ್ನು ಎಚ್. ವಿಶ್ವನಾಥ್ ಸ್ಪಷ್ಟವಾಗಿ ಅಂದಾಜು ಮಾಡಿಯೇ ಈ ಪ್ರತ್ಯೇಕ ಜಿಲ್ಲೆಯ ಬ್ರಹ್ಮಾಸ್ತ್ರ ಸಿದ್ಧ ಮಾಡಿಕೊಂಡು ಈಗ ಪ್ರಯೋಗಿಸಿದ್ದಾರೆ. ಈ ಕ್ಷಣದ ಮಟ್ಟಿಗೆ ಇದು ಕೆಲಸ ಮಾಡಿದಂತೆ ಕಾಣುತ್ತಿದೆ.
ವಿಶ್ವನಾಥ್ ಹೇಳಿದ್ದು ಏನು?
ಅಖಾಡಕ್ಕಿಳಿದ ಮೊದಲ ದಿನವೇ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ. ನಾನು ಹುಣಸೂರಿನಿಂದ ಗೆದ್ದು ಮಂತ್ರಿಯಾಗುತ್ತೇನೆ. ಹುಣಸೂರು ತಾಲೂಕನ್ನು ಹೊಸ ಜಿಲ್ಲೆಯಾಗಿ ಮಾಡುತ್ತೇನೆ. ಇದು ನನ್ನ ಶಪಥ ಎಂದು ವಿಶ್ವನಾಥ್ ಭರವಸೆ ನೀಡಿದ್ದಾರೆ.
ನನ್ನದು ಬರೀ ಮಾತು, ಟೀಕೆಯಲ್ಲ. ನಾನು ಕನಸುಗಾರ ಪ್ರತ್ಯೇಕ ಜಿಲ್ಲೆಯ ಕನಸನ್ನು ನನಸು ಮಾಡುತ್ತೇನೆ. ನಮ್ಮದೇ ಸರ್ಕಾರ ಇದೆ. ಹುಣಸೂರು ತಾಲೂಕಿನ್ನು ಜಿಲ್ಲೆಯನ್ನಾಗಿ ಮಾಡಿಯೇ ಮಾಡುತ್ತೇನೆ. ಅದಕ್ಕೆ ದೇವರಾಜ ಅರಸು ಹೆಸರನ್ನು ಇಡುತ್ತೇನೆ. ಈ ಮಾತು ಚುನಾವಣೆಗೆ ಸೀಮಿತ ಅಲ್ಲ. ಫಲಿತಾಂಶದ ಮರುದಿನದಿಂದಲೇ ಈ ಪ್ರಕ್ರಿಯೆ ಪ್ರಾರಂಭಿಸುತ್ತೇನೆ ಎಂದು ವಿಶ್ವನಾಥ್ ಮಾತು ಕೊಟ್ಟಿದ್ದಾರೆ.
ಬಿಜೆಪಿ ಸೇರುವುದಕ್ಕೂ ಮುನ್ನ ಸಹ ಸಹ ವಿಶ್ವನಾಥ್ ಅವರು ಹುಣಸೂರು ತಾಲೂಕನ್ನು ಜಿಲ್ಲೆಯಾಗಿ ಘೋಷಿಸಬೇಕು ಎಂದು ಹೇಳಿಕೆ ನೀಡಿದ್ದರು. ಹೊಸ ಜಿಲ್ಲೆಗೆ ಡಿ.ದೇವರಾಜ ಅರಸ್ ಜಿಲ್ಲೆ ಹೆಸರಿಡಬೇಕು. ಹೊಸ ಜಿಲ್ಲೆ ವ್ಯಾಪ್ತಿಗೆ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ಜೊತೆ ಹೊಸ ತಾಲೂಕು ಸರಗೂರು ಹಾಗೂ ಸಾಲಿಗ್ರಾಮ ಸೇರಿಸಿ ಒಂದು ಜಿಲ್ಲೆ ಮಾಡಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದರು.