ಬೆಂಗಳೂರು: ಇಂದು ಮಧ್ಯಾಹ್ನ ರಾಜ್ಯದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು ದೋಸ್ತಿ ನಾಯಕರು ಏನೇನೋ ಲೆಕ್ಕಾಚಾರ ಹಾಕ್ಕೊಂಡಿದ್ದರೆ, ಬಿಜೆಪಿಯವರು ಪ್ರತಿತಂತ್ರ ರೂಪಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ಕಾಂಗ್ರೆಸ್‍ನ ಅತೃಪ್ತರೇ ಸರ್ಕಾರ ಬೀಳಿಸುತ್ತಾರೆ. ಅಲ್ಲಿಯವರೆಗೆ ನಾವು ಸುಮ್ಮನಿರೋಣ ಎಂದು ಬಿಜೆಪಿಗರು ಕಾಯ್ತಿದ್ದಾರಂತೆ. ಜೊತೆಗೆ ಸಂಸತ್ ಅಧಿವೇಶನ ಮುಗಿಯುವವರೆಗೆ ಸುಮ್ಮನಿರಿ ಎಂದು ದೆಹಲಿಗೆ ಹೋಗಿದ್ದ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿ ಕಳುಹಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಇದೀಗ ಯಡಿಯೂರಪ್ಪ ಕಾದು ನೋಡೋಣ ಅಂತಿದ್ದಾರೆ. ಹೀಗಾಗಿ ಅಧಿಕಾರಕ್ಕೇರೋದನ್ನು ಸ್ವಲ್ಪ ದಿನ ಪಕ್ಕಕ್ಕಿಟ್ಟು ಜನರ ದೃಷ್ಟಿಯಲ್ಲಿ ಒಳ್ಳೆಯ ವಿಪಕ್ಷ ಎಂದು ಕರೆಸಿಕೊಳ್ಳೋಕೆ ಸರ್ಕಾರದ ವಿರುದ್ಧ ಜಿಂದಾಲ್‍ಗೆ ಭೂಮಿ ಮಾರಾಟ, ಬರ ನಿರ್ವಹಣೆ ವೈಫಲ್ಯ ಸೇರಿ ನಾನಾ ವಿಷಯಗಳನ್ನು ಇಟ್ಕೊಂಡು ಇಂದಿನಿಂದ 2 ದಿನಗಳ ಕಾಲ ಅಹೋರಾತ್ರಿ ಧರಣಿ ಹಮ್ಮಿಕೊಂಡಿದೆ ಎನ್ನಲಾಗಿದೆ.
ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ. ಬಿಜೆಪಿಯ ಎಲ್ಲ ಶಾಸಕರು, ಪರಿಷತ್ ಸದಸ್ಯರು, ಪಾಲಿಕೆ ಸದಸ್ಯರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.