ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾರ್ ನಡೆಯುತ್ತಿದೆ. ರಾಜಕೀಯ ನಾಯಕರು ಟ್ವಿಟ್ಟರ್ ಮೂಲಕ ತಮ್ಮ ವಿರೋಧಿಗಳ ಕಾಲನ್ನು ಎಳೆಯುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಟ್ವಿಟ್ಟರ್ ನಲ್ಲಿ ಟ್ವೀಟ್ ವಾರ್ ನಡೆಸುತ್ತಿವೆ. ಎರಡು ಪಕ್ಷಗಳು ಅಧಿಕೃತ ಟ್ವಟ್ಟರ್ ಖಾತೆ ಮೂಲಕ ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿವೆ.
ಕರ್ನಾಟಕ ಕಾಂಗ್ರೆಸ್ ಈ ಬಾರಿ ಟ್ವಿಟ್ಟರ್ ನಲ್ಲಿ ಬಿಜೆಪಿಗೆ ಬಹಿರಂಗವಾಗಿ 10 ಸವಾಲಗಳನ್ನು ಹಾಕಿದೆ. ‘ನ’ಮಗೆ ‘ಮೋ’ಸ (ನಮೋ) ಎಂಬ ಶೀರ್ಷಿಕೆಯಲ್ಲಿ ಕಾಂಗ್ರೆಸ್, ಕರ್ನಾಟಕ ವಿರೋಧಿ ಬಿಜೆಪಿ ಎಂಬ ಹ್ಯಾಶ್ ಟ್ಯಾಗ್ ಬಳಸಿಕೊಂಡಿದೆ. ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಬಿಜೆಪಿಗೆ ಕೇಳಿದ ಪ್ರಶ್ನೆಗಳು ಹೀಗಿವೆ.
Advertisement
Advertisement
ಪ್ರಶ್ನೆ 1. ಕನ್ನಡ ಹಿತಾಸಕ್ತಿ: ಬಿಜೆಪಿ ನಿರಂತರವಾಗಿ ಕನ್ನಡೇತರ ಅಭ್ಯರ್ಥಿಗಳನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುತ್ತಿದೆ. ಕನ್ನಡೇತರ ನಾಯಕರು ಸಂಸತ್ತಿನಲ್ಲಿ ಕರ್ನಾಟಕದ ಹಿತಾಸಕ್ತಿಗೆ ನ್ಯಾಯ ಒದಗಿಸಿಕೊಡುವರೇ?
Advertisement
ಪ್ರಶ್ನೆ 2. ಮಹದಾಯಿ: ರಾಜ್ಯ ಸರ್ಕಾರ ಮಹದಾಯಿ ಜಲವಿವಾದ ಬಗೆಹರಿಸುವಂತೆ ಮೋದಿ ಬಳಿ ಮನವಿ ಮಾಡಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಮೂರು ರಾಜ್ಯ ಸರ್ಕಾರಗಳ ಜಂಟಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಮೋದಿಯವರಿಗೆ ಮನವಿ ಕೊಟ್ಟಿದ್ದು ಆಗಿದೆ. ಆದ್ರೆ ಮೋದಿ ಸರ್ಕಾರ ಕೀಳು ಮಟ್ಟದ ರಾಜಕಾರಣ ಮಾಡ್ತಿದೆ.
Advertisement
ಪ್ರಶ್ನೆ 3. ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಮೋಸ: ಭಾರತದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಯನ್ನು ತಂದಿದ್ದು, ಪರೀಕ್ಷೆಗಳನ್ನು ಕೇವಲ ಇಂಗ್ಲಿಷ್/ಹಿಂದಿಯಲ್ಲಿ ಬರೆಯುವ ಅವಕಾಶ ನೀಡಿ ಕನ್ನಡ ಮಾಧ್ಯಮವನ್ನು ನಿರ್ಬಂಧಿಸಿದೆ.
ಪ್ರಶ್ನೆ 4. ಬರ ಪರಿಹಾರದಲ್ಲಿ ಮೋಸ: ಕೊಟ್ಟ ಬರ ಪರಿಹಾರ ಕೇವಲ 1,435.95 ಕೋಟಿ ರೂ. ಆದ್ರೆ ಬಿಜೆಪಿ ಆಳ್ವಿಕೆಯ ರಾಜ್ಯಗಳು ಮೋದಿ ಕೃಪಕಟಾಕ್ಷದಿಂದ ಅತ್ಯಧಿಕ ಬರ ಪರಿಹಾರ ಪಡೆದಿವೆ. ಮಹಾರಾಷ್ಟ್ರ-8.195 ಕೋಟಿ. ಗುಜರಾತ್- 3,894 ಕೋಟಿ, ರಾಜಸ್ಥಾನ-2,153 ಕೋಟಿ.
ಪ್ರಶ್ನೆ 5. ಸಿಆರ್ ಪಿಎಫ್: ಮೋದಿ ಸರ್ಕಾರ ನಗರದ ಹೊರವಲಯದ ತರಳು ಗ್ರಾಮದಲ್ಲಿದ್ದ ಸಿಆರ್ ಪಿಎಫ್ ಕಚೇರಿಯನ್ನು ಉತ್ತರಪ್ರದೇಶದಲ್ಲಿರುವ ರಾಜನಾಥ್ ಸಿಂಗ್ ತವರು ಪ್ರದೇಶ ಚಾಂದೌಅಗೆ ಎತ್ತಂಗಡಿ ಮಾಡಿದೆ.
ಪ್ರಶ್ನೆ 6. ಕರ್ನಾಟಕ ಬಾವುಟ: ರಾಜ್ಯ ಸರ್ಕಾರವು ಕನ್ನಡದ ಕಂಪನ್ನು ಪಸರಿಸುವ ನಾಡಧ್ವಜಕ್ಕೆ ಹೊಸ ರೂಪು ನೀಡಿ ಕನ್ನಡದ ಮೆರುಗನ್ನು ಹೆಚ್ಚಿಸಿದೆ. ಪ್ರತ್ಯೇಕ ಕನ್ನಡ ಬಾವುಟಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಕನ್ನಡ ವಿರೋಧಿ ಧೋರಣೆ ತಾಳಿದ್ದಾರೆ.
ಪ್ರಶ್ನೆ 7. ರಫಾಲ್ ಹೆಚ್‍ಎಎಲ್: ಕೇಂದ್ರ ಬಿಜೆಪಿ ಸರ್ಕಾರದ ಹೊಸ ವಿಮಾನದ ಗುತ್ತಿಗೆಯನ್ನು ದೇಶದ ಹೆಮ್ಮೆಯ ಹೆಚ್‍ಎಎಲ್ ಗೆ ನೀಡದೇ ಮೋದಿ ಮಿತ್ರ ಅನಿಲ್ ಅಂಬಾನಿ ಸಂಸ್ಥೆಗೆ ನೀಡಿ ನಾಡಿನ ಯುವಜನತೆಯ ಉದ್ಯೋಗಗಳಿಗೆ ಕಲ್ಲು ಹಾಕಿದೆ.
ಪ್ರಶ್ನೆ 8. ಸಾಲ ಮನ್ನಾ ವಿರೋಧಿ ಸರ್ಕಾರ: ರಾಷ್ಟ್ರೀಕೃತ ಹಾಗು ವಾಣಿಜ್ಯ ಬ್ಯಾಂಕ್ ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರವನ್ನು ಕೇಳಿಕೊಂಡಾಗ ಯಾವುದೇ ಸಹಕಾರ ನೀಡದೇ ಮೋದಿ ಸರ್ಕಾರವು ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿದೆ.
ಪ್ರಶ್ನೆ 9. ಬಲವಂತವಾಗಿ ಹಿಂದಿ ಹೇರಿಕೆ: ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಬಲವಂತವಾಗಿ ಹಿಂದಿಯನ್ನು ಹೇರುತ್ತಿದೆ (ಉದಾಹರಣೆ ನಮ್ಮ ಮೆಟ್ರೊ ಪ್ರದರ್ಶನ ಫಲಕಗಳಲ್ಲಿ ಹಿಂದಿ ಭಾಷೆ). ಈ ನಿಲುವು ಕೆಚ್ಚೆದೆಯ ಕನ್ನಡಿಗರನ್ನು ಕೆರಳಿಸಿದ್ದು ರಾಜ್ಯ ಸರ್ಕಾರವು ಕನ್ನಡ ಭಾಷೆಯ ಬೆಳವಣಿಗೆಗೆ ಹಾಗೂ ಸಂರಕ್ಷಣೆಗೆ ಬದ್ಧವಾಗಿದೆ.
ಪ್ರಶ್ನೆ 10. ಕಾವೇರಿ: 2016ನೇ ಸಾಲಿನಲ್ಲಿ ಕಾವೇರಿ ನೀರಿನ ಸಮಸ್ಯೆ ರಾಜ್ಯದಲ್ಲಿ ಸ್ಫೋಟಗೊಂಡಿತ್ತು. ಆಗಲೇ ಸಿಎಂ ಕಾವೇರಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಿಕೊಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದರು. ಆದ್ರೆ ಸಿಎಂ ಪತ್ರಕ್ಕೆ ಮೋದಿ ಉತ್ತರ ನೀಡಲಿಲ್ಲ. ಈ ವಿಚಾರ ಬಗೆಹರಿಸುವ ಕುರಿತು ಸರ್ವಪಕ್ಷ ಸಭೆ ಕರೆದರೂ ಬಿಜೆಪಿ ಸಂಸದರು ಹಾಗು ಕೇಂದ್ರ ಸಚಿವರು ಬರಲಿಲ್ಲ.
ಕಾಂಗ್ರೆಸ್ ನ ಈ 10 ಪ್ರಶ್ನೆಗಳಿಗೂ ಬಿಜೆಪಿ ತಿರುಗೇಟು ನೀಡಿದೆ. ಕೇರಳ ಮೂಲದ ಶಾಸಕ ಹ್ಯಾರಿಸ್ ಗೆ ಟಿಕೆಟ್ ನೀಡಿದ್ದೀರಿ, ಬಿಜೆಪಿ ಸರ್ಕಾರ ರೈಲ್ವೆ ಟಿಕೆಟ್ ಗಳಲ್ಲಿ ಕನ್ನಡ ಮುದ್ರಣಕ್ಕೆ ಚಾಲನೆ ನೀಡಿದೆ. ನೀಟ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶವನ್ನ ನೀಡಿದೆ ಅಂತಾ ತಿರುಗೇಟು ನೀಡಿದೆ.