– ಸರ್ವಾಧಿಕಾರಿಯ ಮತ್ತೊಂದು ಮುಖ ಎಂದ ರಾಗಾ
ಗಾಂಧಿನಗರ (ಸೂರತ್): 2024ರ ಲೋಕಸಭಾ ಚುನಾವಣೆ ಮುಗಿಯುವ ಮುನ್ನವೇ ಸೂರತ್‌ನಲ್ಲಿ (Surat Lok Sabha Seat) ಬಿಜೆಪಿ ಮೊದಲ ಗೆಲುವಿನ ಖಾತೆ ತೆರಿದಿದೆ. ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಬಗ್ಗೆ ಜನರಿಗೆ ಕೋಪವೂ ಇದೆ, ಭಯವೂ ಇದೆ. ಹಾಗಾಗಿ ಈಗಿನಿಂದಲೇ ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ (Jairam Ramesh) ಆರೋಪಿಸಿದ್ದಾರೆ.
Advertisement
Advertisement
ಮೋದಿ ಅವರ ಅನ್ಯಾಯ ಕಾಲದಲ್ಲಿ ಎಂಎಸ್‌ಎಂಇ ಮಾಲೀಕರು ಮತ್ತು ಉದ್ಯಮಿಗಳು ಎದುರಿಸುತ್ತಿರುವ ಸಂಕಷ್ಟ ಮತ್ತು ಅವರ ಆಕ್ರೋಶ ಬಿಜೆಪಿಯನ್ನು ಯಾವ ಹಂತಕ್ಕೆ ಕೊಂಡೊಯ್ದಿದೆ ಎಂದರೆ, ಅವರು 1984ರಿಂದ ಲೋಕಸಭೆ ಚುನಾವಣೆಯಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿರುವ ಸೂರತ್ ಕ್ಷೇತ್ರದಲ್ಲಿ ʻಮ್ಯಾಚ್-ಫಿಕ್ಸ್ʼ ಮಾಡಲು ಪ್ರಯತ್ನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
ಸರ್ವಾಧಿಕಾರಿಯ ಮತ್ತೊಂದು ಮುಖ:
ಇನ್ನೂ ಈ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ (Rahul Gandhi), ಸರ್ವಾಧಿಕಾರಿಯ ನಿಜವಾದ ಮುಖ ಮತ್ತೊಮ್ಮೆ ದೇಶದ ಮುಂದಿದೆ. ಜನರ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಕಸಿದುಕೊಳ್ಳುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶಪಡಿಸುವ ಮತ್ತೊಂದು ಹೆಜ್ಜೆ ಎಂದು ದೂರಿದ್ದಾರೆ.
Advertisement
ಸೂರತ್ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದೇಗೆ?
2024ರ ಲೋಕಸಭಾ ಚುನಾವಣೆಯಲ್ಲಿ ಸೂರತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಅಲ್ಲದೇ ನಾಮಪತ್ರ ಸಲ್ಲಿಸಿದ್ದ ಉಳಿದ 8 ಮಂದಿ ಸ್ವತಂತ್ರ ಅಭ್ಯರ್ಥಿಗಳೂ ಹಿಂದೆ ಸರಿದಿದ್ದರು. ಹೀಗಾಗಿ ಮತದಾನ ನಡೆಯದೇ ಗೆಲುವು ಬಿಜೆಪಿ ಪಾಲಾಯಿತು. ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾದರು.
ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದ್ದು ಯಾಕೆ?
ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರದಲ್ಲಿನ ಸಹಿಗಳು ತಮ್ಮದಲ್ಲ ಎಂದು ಮೂವರು ಸೂಚಕರು ವಕೀಲರ ಮೂಲಕ ಚುನಾವಣಾಧಿಕಾರಿಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ್ದ ಚುನಾವಣಾಧಿಕಾರಿಗಳು ಸಹಿಯನ್ನು ಪರಿಶೀಲಿಸಿದ್ದರು. ಪರಿಶೀಲಿಸಿದ ಬಳಿಕ ನಾಮಪತ್ರಗಳಲ್ಲಿನ ಸೂಚಕರ ಸಹಿಯಲ್ಲಿ ವ್ಯತ್ಯಾಸಗಳಿದ್ದವು ಮತ್ತು ಅವು ನಿಜವಲ್ಲ ಎಂದು ತಿಳಿದುಬಂದಿದ್ದರಿಂದ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಸೌರಭ್ ಪರ್ಧಿ ತಿಳಿಸಿದರು. ತನ್ನ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ.