ಬಾಗಲಕೋಟೆ: ಗಾಂಧಿ ಜಯಂತಿ ದಿನವೇ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಚಿವರು, ಶಾಸಕರ ಎದುರೇ ಕೈ ಕಾರ್ಯಕರ್ತರು ಬಾಗಲಕೋಟೆಯಲ್ಲಿ ಗಲಾಟೆ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಫೋಟೋ ತೆಗೆಯುವ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಬ್ರಿಗೇಡ್ ಜಿಲ್ಲಾ ಅಧ್ಯಕ್ಷ ನಾಗರಾಜ್ ಹದ್ಲಿ ಮತ್ತು ನಗರಸಭೆ ಸದಸ್ಯ ಗೋವಿಂದ ಬಳ್ಳಾರಿ ಪರಸ್ಪರ ಏಕವಚನದಲ್ಲಿ ಮಾತಾನಾಡುವ ಮೂಲಕ ವಾಗ್ವಾದ ಮಾಡಿದ್ದಾರೆ.
ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಗಲಾಟೆ ನಡೆದಿದೆ. ಇತ್ತ ಕಾರ್ಯಕ್ರಮದಲ್ಲಿ ಇದ್ದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕ ಎಚ್.ವೈ.ಮೇಟಿ ಅವರ ಎದುರೇ ಈ ಗಲಾಟೆ ನಡೆಸಿದ್ದು, ತೀವ್ರ ಮುಜಗರ ಪಟ್ಟುಕೊಳ್ಳುವಂತಾಗಿದೆ. ಈ ಮೂಲಕ ಮೂಲ ಕಾಂಗ್ರೆಸ್ಸಿಗರು, ವಲಸೆ ಕಾಂಗ್ರೆಸ್ಸಿಗರ ಮಧ್ಯೆ ಮತ್ತೆ ಭಿನ್ನಮತ ಸ್ಫೋಟವಾಗಿದೆ.
ಈ ಗಲಾಟೆಯ ಬಗ್ಗೆ ಸಚಿವ ಆರ್.ಬಿ ತಿಮ್ಮಾಪುರ ಪ್ರತಿಕ್ರಿಯಿಸಿ, ವೈಯಕ್ತಿಕ ವಿಚಾರಕ್ಕೆ ಗಲಾಟೆಯಾಗಿದ್ದು ನಿಜ. ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಪಕ್ಷದ ಶಿಸ್ತನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
https://youtu.be/iyOiyLIam98