ಬೆಂಗಳೂರು: ಮಧ್ಯಪ್ರದೇಶ ಬಂಡಾಯ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿರುವ ರೆಸಾರ್ಟ್ ಮುಂದೆ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಕೊಡಗುರ್ಕಿ ಬಳಿಯ ಪ್ರೆಸ್ಟೀಜ್ ಗಾಲ್ಪ್ ಶೈರ್ ರೆಸಾರ್ಟ್ ಬಳಿ ಈಗಾಗಲೇ 19 ಜನ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು ಉಳಿದುಕೊಂಡಿದ್ದಾರೆ. ಹೀಗಾಗಿ ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರೆಸಾರ್ಟ್ ಬಳಿ ಆಗಮಿಸಿ ಅಕ್ರಮವಾಗಿ ಕೂಡಿ ಹಾಕಿರುವ ನಮ್ಮ ಕಾಂಗ್ರೆಸ್ ಶಾಸಕರನ್ನ ಹೊರಗೆ ಬಿಡುವಂತೆ ಘೋಷಣೆ ಕೂಗಿದರು. ಇನ್ನು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ 500 ಮೀ. ದೂರದಲ್ಲೇ ನಂದಿಬೆಟ್ಟದ ರಸ್ತೆಯಲ್ಲಿ ಬ್ಯಾರಿಕೆಡ್‍ಗಳನ್ನ ಹಾಕಿ ಪ್ರತಿಭಟನಾಕಾರರನ್ನ ತಡೆ ಹಿಡಿಯಲಾಯ್ತು.
Advertisement
Advertisement
ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಕುತಂತ್ರವಾಗಿ ಕಾಂಗ್ರೆಸ್ ಶಾಸಕರನ್ನ ಕೂಡಿಹಾಕಿ ಹಿಂಬಾಗಿಲ ಮುಖಾಂತರ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು ಹೊರಟಿದೆ. ಈ ಕೂಡಲೇ ನಮ್ಮ ಶಾಸಕರನ್ನ ಹೊರ ಬಿಡುವಂತೆ ಒತ್ತಾಯಿಸಿದರು. ರಸ್ತೆ ಬಂದ್ ಮಾಡಿದ ಹಿನ್ನೆಲೆ ಕಾಂಗ್ರೆಸ್ ಮುಖಂಡರನ್ನ ಬಂಧಿಸಿ ಪೊಲೀಸರು ಬೇರೆಡೆಗೆ ಕರೆದೊಯ್ದರು. ಜೊತೆಗೆ ರೆಸಾರ್ಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.