ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019ರ ದಸರಾ ಗಜಪಯಣಕ್ಕೆ ನಾಳೆಯಿಂದ ಚಾಲನೆ ನೀಡಬೇಕಿದೆ. ಆದರೆ ಒಂದೆಡೆ ಜಿಲ್ಲೆಯ ಸ್ಥಳೀಯ ಶಾಸಕರು ಅನರ್ಹಗೊಂಡಿದ್ದಾರೆ, ಇನ್ನೊಂದು ಕಡೆ ಈ ಭಾಗದಲ್ಲಿ ಯಾವ ಸಚಿವರು ಇಲ್ಲ. ಹೀಗಾಗಿ ದಸರಾ ಗಜಪಯಣಕ್ಕೆ ಸ್ವಾಗತ, ಚಾಲನೆ ನೀಡುವವರು ಯಾರು ಎಂಬ ಪ್ರಶ್ನೆ ಹುಟ್ಟುಕೊಂಡಿದೆ.
ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ದಸರಾ ಗಜಪಯಣಕ್ಕೆ ಚಾಲನೆ ನೀಡುವ ವಿಚಾರಕ್ಕೆ ಗೊಂದಲ ಶುರುವಾಗಿದೆ. ಪ್ರತಿ ವರ್ಷದಂತೆ ಈ ವರ್ಷ ದಸರಾ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಅನುಮಾನ ಹುಟ್ಟುಕೊಂಡಿದೆ. ಯಾಕೆಂದರೆ ಪ್ರತಿ ಬಾರಿ ದಸರಾ ಗಜಪಯಣಕ್ಕೆ ಉಸ್ತವಾರಿ ಸಚಿವರು ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ಜಿಲ್ಲೆಯಿಂದ ಯಾವ ನಾಯಕರು ಸಚಿವರಾಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರ ಬಳಿ ಚಾಲನೆ ಕೊಡಿಸೋಣ ಎಂದರೆ ಶಾಸಕರು ಕೂಡ ಅನರ್ಹರಾಗಿದ್ದಾರೆ. ಹೀಗಾಗಿ ಗಜಪಯಣಕ್ಕೆ ಚಾಲನೆ ನೀಡುವವರು ಯಾರು ಎಂಬ ಗೊಂದಲ ಎದುರಾಗಿದೆ.
Advertisement
Advertisement
ಪದ್ಧತಿ ಪ್ರಕಾರ ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಗಜಪಯಣಕ್ಕೆ ಚಾಲನೆ ನೀಡಲಾಗುತ್ತದೆ. ಶಾಸಕರು, ಸಚಿವರು ಇಲ್ಲದ ಕಾರಣಕ್ಕೆ ಈ ಬಾರಿ ಹೇಗೆ ಗಜಪಯಣಕ್ಕೆ ಚಾಲನೆ ನೀಡಬೇಕು? ಸರ್ಕಾರ ಇದ್ದರೂ ಅಧಿಕಾರಿಗಳೇ ಚಾಲನೆ ಕೊಡಬೇಕೇ? ಅಥವಾ ಬೇರೆ ಯಾವ ವ್ಯವಸ್ಥೆ ಮಾಡಬೇಕು ಎಂಬ ಚರ್ಚೆ ಆರಂಭವಾಗಿದೆ.