ರಾಯಚೂರು: ಶೈಕ್ಷಣಿಕ ಹಾಗೂ ಹುದ್ದೆಯ ಮುಂಬಡ್ತಿಗಳಲ್ಲಿ ಮೀಸಲಾತಿ ಒದಗಿಸುವ ಮೂಲಕ ಹೈದ್ರಾಬಾದ್ ಕರ್ನಾಟಕ ಭಾಗದ ಜನರ ಅಭಿವೃದ್ದಿಗೆ ಪೂರಕವಾಗಬೇಕಿದ್ದ ಭಾರತ ಸಂವಿಧಾನದ ಅನುಚ್ಛೇದ 371 (ಜೆ) ರಾಯಚೂರಿನ ಪೊಲೀಸರಲ್ಲಿ ತಾರತಮ್ಯ ಮೂಡಿಸಿದೆ. ಕೇವಲ 5 ವರ್ಷ ಅನುಭವವಿರುವವರಿಗೆ ಬಡ್ತಿ ಸಿಗುತ್ತಿದ್ದರೆ, 15 ವರ್ಷ ದುಡಿದವರಿಗೆ ಯಾವುದೇ ಸೌಲಭ್ಯವಿಲ್ಲದಂತಾಗಿದೆ. ಹೋರಾಟಗಳ ಮೂಲಕ ಪಡೆದ ಸಾಂವಿಧಾನಿಕ ಹಕ್ಕು ಈಗ ಇಲ್ಲಿನ ಪೊಲೀಸರಿಗೆ ಮುಳುವಾಗಿದೆ. ಹೀಗಾಗಿ ಪೊಲೀಸರು ನ್ಯಾಯಕ್ಕಾಗಿ ಧ್ವನಿ ಎತ್ತಲು ಮುಂದಾಗಿದ್ದಾರೆ.
Advertisement
2017 ಜನವರಿ 27 ರಂದು ರಾಯಚೂರು ಜಿಲ್ಲೆಯಲ್ಲಿ 43 ಜನರಿಗೆ ಸಿವಿಲ್ ಪೊಲೀಸ್ ಕಾನ್ಸಟೇಬಲ್ (ಸಿಪಿಸಿ) ಹುದ್ದೆಯಿಂದ ಸಿವಿಲ್ ಹೆಡ್ ಕಾನ್ಸಟೇಬಲ್ (ಸಿಹೆಚ್‍ಸಿ) ಹುದ್ದೆಗೆ ನೀಡಲಾಗಿರುವ ಮುಂಬಡ್ತಿಯಲ್ಲಿ ತಾರತಮ್ಯವಾಗಿದೆ. ಮುಂಬಡ್ತಿಗೆ ಸ್ಥಳೀಯ ವೃಂದ ಭರ್ತಿಯಾದ ಬಳಿಕ ಪರಸ್ಥಳೀಯ ವೃಂದದ ಹುದ್ದೆಗಳಿಗೆ ಸ್ಥಳೀಯರನ್ನೇ ಪರಿಗಣಿಸಲಾಗಿದೆ. ಆದ್ರೆ ಜೇಷ್ಠತೆಯ ಹಿರಿತನದ ಆಧಾರದ ಮೇಲೆ ಬಡ್ತಿ ಸಿಗದೆ ಇತ್ತೀಚಿಗೆ ಹುದ್ದೆಗೆ ಸೇರಿದವರಿಗೆ ಬಡ್ತಿ ನೀಡುವ ಮೂಲಕ 15 ವರ್ಷಗಳಷ್ಟು ಅನುಭವವಿರುವವರಿಗೆ ಅನ್ಯಾಯವಾಗಿದೆ. 2011 ರಲ್ಲಿ ಕೆಲಸಕ್ಕೆ ಸೇರಿದ 43 ಜನ ಈಗ ಹೆಡ್ ಕಾನ್ಸಟೇಬಲ್‍ಗಳಾಗಿದ್ದಾರೆ. ಆದ್ರೆ 2002, 2005, 2007, 2008 ಹಾಗೂ 2009 ನೇ ಸಾಲಿನಲ್ಲಿ ಕೆಲಸಕ್ಕೆ ಸೇರಿದವರಿಗೆ ಬಡ್ತಿ ನೀಡಲಾಗಿಲ್ಲ. ಕಲಂ 371 (ಜೆ) ಪ್ರಕಾರ ಪರಸ್ಥಳೀಯ ವೃಂದಕ್ಕೆ ಜೇಷ್ಠತೆಯಲ್ಲಿ ಕೆಳಗಿನಿಂದ ಮೇಲಕ್ಕೆ ಆಯ್ಕೆ ಮಾಡುತ್ತಿರುವುದೇ ಯಡವಟ್ಟಿಗೆ ಕಾರಣವಾಗಿದೆ. ಎಂದು ಆರೋಪಿಸಲಾಗಿದೆ.
Advertisement
Advertisement
ಕಲಂ 371 ಜೆ ಪ್ರಕಾರ ಜಿಲ್ಲೆಯಲ್ಲಿ ಸ್ಥಳೀಯೇತರ ವೃಂದಕ್ಕೆ ಒಟ್ಟು 74 ಸಿಹೆಚ್‍ಸಿ ಹುದ್ದೆಗಳು ಲಭ್ಯವಾಗಿವೆ. ಇದರಲ್ಲಿ 29 ಜನ ಈಗಾಗಲೇ ಸಿವಿಲ್ ಹೆಡ್ ಕಾನ್ಸಟೇಬಲ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ 43 ಸಿವಿಲ್ ಹೆಡ್ ಕಾನ್ಸಟೇಬಲ್ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಆದ್ರೆ ರಾಜ್ಯಮಟ್ಟದಲ್ಲಿ ಜೇಷ್ಠತೆಯಲ್ಲಿ ಮೇಲಿದ್ದರು ಪರಸ್ಥಳೀಯ ವೃಂದದಲ್ಲಿ ಹಿಂದೆ ಬೀಳುವಂತಾಗಿದೆ. ಹೀಗಾಗಿ ಮುಂಬಡ್ತಿ ವಂಚಿತರಾದ ಪೊಲೀಸ್ ಕಾನ್ಸಟೇಬಲ್‍ಗಳು ತಾರತಮ್ಯ ಸರಿಪಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿದ್ದಾರೆ. ಸಂವಿಧಾನ ಅಳವಡಿಕೆಯಲ್ಲಿ ಗೊಂದಲಗಳು ಸೃಷ್ಠಿಯಾಗಿದ್ದು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನ್ ಸಿಂಗ್ ರಾಥೋರ್ ಹೇಳಿದ್ದಾರೆ.
Advertisement
ಕಲಂ 371(ಜೆ) ಅಡಿ ಎರಡೆರಡು ವೃಂದಗಳನ್ನಾಗಿ ಮಾಡಿ ಪ್ರಮೋಷನ್ ನೀಡುತ್ತಿರುವುದರಿಂದ ಜೇಷ್ಠತೆಯಲ್ಲಿ ಹಿರಿಯರಾಗಿರುವ ನೌಕರರಿಗೆ ಅನ್ಯಾಯವಾಗುತ್ತಿದೆ. ಪೊಲೀಸ್ ಇಲಾಖೆ ಮಾತ್ರವಲ್ಲದೆ ಶಿಕ್ಷಣ ಇಲಾಖೆಯಲ್ಲೂ ಇದೇ ಸಮಸ್ಯೆ ತಲೆದೋರಿದ್ದು ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕಿದೆ ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟಗಾರ ಡಾ.ರಜಾಕ್ ಉಸ್ತಾದ್ ಆಗ್ರಹಿಸಿದ್ದಾರೆ.