ಬೆಂಗಳೂರು: ಕಾಂಗ್ರೆಸ್ ನ ಇಬ್ಬರು ಪ್ರಭಾವಿ ನಾಯಕರುಗಳಾದ ಡಿ.ಕೆ. ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ನಡುವೆ ಶಿತಲ ಸಮರ ಏರ್ಪಟ್ಟಿದ್ದು, ಕೈ ನಾಯಕರುಗಳಲ್ಲೇ ಮುಸುಕಿನ ಗುದ್ದಾಟ ರಾಜ್ಯ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.
ಹೌದು, ಕಾಂಗ್ರೆಸ್ ನ ಪ್ರಭಾವಿ ನಾಯಕರುಗಳಾದ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ನ ನೂತನ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ನಡುವೆ ನಡೆಯುತ್ತಿರುವ ಶೀತಲ ಸಮರ ಈಗ ಬಹಿರಂಗವಾಗಿದೆ.
ಜೂನ್ 11 ರಂದು ಕೆಪಿಸಿಸಿ ಅಧ್ಯಕ್ಷರ ಪ್ರಮಾಣ ವಚನಕ್ಕೆ ಶುಭಕೋರಿ ಹಾಕಿದ್ದ ಫ್ಲೆಕ್ಸ್ ಬ್ಯಾನರ್ ಗಳಲ್ಲಿ ಡಿ.ಕೆ. ಶಿವಕುಮಾರ್ ಎಲ್ಲೆಡೆ ಮಿಂಚತೊಡಗಿದ್ದರು. ಇದನ್ನು ಕಂಡು ಇರುಸುಮುರುಸಾದ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಕೆಲವು ಬ್ಯಾನರ್ ಗಳನ್ನು ತೆಗಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಕೇಳಿದ ಡಿ.ಕೆ.ಶಿವಕುಮಾರ್ ಕೆಂಡಾಮಂಡಲವಾಗಿ ನನ್ನ ಬಗ್ಗೆ ಮಾತನಾಡಿ, ನನ್ನ ಬ್ಯಾನರ್ ತೆಗೆಸಿದ್ದರಾ, ಇರಲಿ ಎಂದು ಆಪ್ತರ ಮುಂದೆ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.
ಡಿಕೆಶಿ ಹೆಸರಿಲ್ಲ: ಜುಲೈ 28 ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ, ಕೆಪಿಸಿಸಿಯ ವಿವಿಧ ಮುಂಚೂಣಿ ಘಟಕಗಳ ಮಾಜಿ ಪದಾಧಿಕಾರಿಗಳ ಒಕ್ಕೂಟದಿಂದ ದಿನೇಶ್ ಗುಂಡೂರಾವ್ ಗೆ ಸನ್ಮಾನ ಸಮಾರಂಭನ್ನು ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ಡಿ.ಕೆ. ಶಿವಕುಮಾರ್ ಹೊರತು ಪಡಿಸಿ ಬೇರೆಲ್ಲಾ ರಾಜ್ಯ ನಾಯಕರುಗಳಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ವೀರಪ್ಪ ಮೊಯ್ಲಿ ಸೇರಿದಂತೆ ಎಲ್ಲಾ ಸಚಿವರು, ಮಾಜಿ ಸಿಎಂಗಳು ಹಾಗೂ ಸಂಸದರ ಹೆಸರು ಆಹ್ವಾನ ಪತ್ರಿಕೆಯಲ್ಲಿದೆ. ಆದರೆ ಡಿಕೆಶಿ ಹೆಸರು ಮಾತ್ರ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಚಿವರನ್ನು ಕೈ ಬಿಟ್ಟಿರುವ ವಿಚಾರದಲ್ಲಿ ದಿನೇಶ್ ಗುಂಡೂರಾವ್ ಅವರ ಕೈವಾಡವಿದ್ದು, ಉದ್ದೇಶಪೂರ್ವಕವಾಗಿ ಹೆಸರು ಹಾಕದೇ ಇದ್ದಿದ್ದಕ್ಕೆ ಡಿ.ಕೆ.ಶಿವಕುಮಾರ್ ಸಿಟ್ಟಾಗಿದ್ದಾರೆ ಎನ್ನಲಾಗಿದೆ.
ಡಿಕೆಶಿ ಹಾಗೂ ದಿನೇಶ್ ಗುಂಡೂರಾವ್ ನಡುವೆ ಅಸಮಧಾನ ಭುಗಿಲೇಳಲು ಮುಖ್ಯ ಕಾರಣ ಕೆಪಿಸಿಸಿ ಅಧ್ಯಕ್ಷ ಗಾದಿ ಎನ್ನಲಾಗುತ್ತಿದೆ. ದಿನೇಶ್ ಗುಂಡೂರಾವ್ ಈಗ ಅಧ್ಯಕ್ಷರಾಗಿದ್ದರೂ ಮುಂದಿನ ಲೋಕಸಭಾ ಚುನಾವಣೆ ಸಮಯದಲ್ಲಿ ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬರುತ್ತಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನೊಂದೆಡೆ ಯಾರೇ ಅಧ್ಯಕ್ಷರಾದರೂ ಡಿಕೆಶಿ ನೇ ಪವರ್ ಫುಲ್ ಎಂಬುದನ್ನ ಸುಳ್ಳು ಮಾಡಲು ದಿನೇಶ್ ಗುಂಡೂರಾವ್ ತಮ್ಮ ಅಧಿಕಾರ ಚಲಾಯಿಸಲು ಮುಂದಾಗಿದ್ದೆ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.