ಕೋಲಾರ: ರಸ್ತೆ ಅಗಲೀಕರಣಕ್ಕಾಗಿ ಅಂಗಡಿ ತೆರವುಗೊಳಿಸುವ ವೇಳೆ ಪುರಸಭೆ ಸಿಬ್ಬಂದಿ ಹಾಗೂ ನಿವೃತ್ತ ಪಿಎಸ್‍ಐ ನಡುವೆ ಮಾರಾಮರಿ ನಡೆದಿದ್ದು, ಘಟನೆಯಲ್ಲಿ ಬಂದೋಬಸ್ತ್ ಮಾಡುತ್ತಿದ್ದ ಪಿಎಸ್‍ಐ ಹಾಗೂ ಓರ್ವ ಪೌರ ಕಾರ್ಮಿಕನಿಗೆ ಗಾಯವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಹೊಸ ಬಸ್ ನಿಲ್ದಾಣ ಮುಂಭಾಗದಲ್ಲಿ ನಿವೃತ್ತ ಪಿಎಸ್‍ಐ ರಘುರಾಮ್ ರೆಡ್ಡಿ ಎಂಬವರಿಗೆ ಸೇರಿದ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಪುರಸಭೆ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ರಘುರಾಮ್ ರೆಡ್ಡಿ ಹಾಗು ಕುಟುಂಬಸ್ಥರು ವಿರೋಧಿಸಿದ್ದಾರೆ. ಪುರಸಭೆ ಸಿಬ್ಬಂದಿ ಮತ್ತು ರಘುರಾಮ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಲ್ಲು ತೂರಾಟ ಸಹ ನಡೆದಿದೆ.
Advertisement
Advertisement
ಕಲ್ಲು ತೂರಾಟದಲ್ಲಿ ಪುರಸಭೆ ಸಿಬ್ಬಂದಿ ಶಿವ ಹಾಗೂ ಬಂಗಾರಪೇಟೆ ಪಿಎಸ್‍ಐ ರವಿಕುಮಾರ್‍ಗೆ ಎಂಬವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಿವೃತ್ತ ಪಿಎಸ್‍ಐ ರಘುರಾಮ ರೆಡ್ಡಿ ಅವರ ಮಕ್ಕಳಾದ ಕಿರಣ್ ಕುಮಾರ್, ವಿಕ್ರಮ್ ಹಾಗು ಸಂಬಂಧಿಗಳಾದ ಸಂಪಂಗಿ ರೆಡ್ಡಿ, ಕೃಷ್ಣಪ್ಪ ಐದು ಜನ ಅರೋಪಿಗಳನ್ನ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಮುಂಜಾಗ್ರತೆ ಕ್ರಮವಾಗಿ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ಬಂಗಾರಪೇಟೆ ಪಟ್ಟಣಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಮಧ್ಯ ವಿವಿಧ ಸಂಘಟನೆಗಳ ಮುಖಂಡರು ಅರೋಪಿಗಳನ್ನ ಬಂಧಿಸುವಂತೆ ಒತ್ತಾಯಿಸಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ಮಾಡಿದರು.
ಸ್ಥಳಕ್ಕೆ ಬಂದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ತಹಶೀಲ್ದಾರ್ ಸತ್ಯಪ್ರಕಾಶ್, ಪಿಎಸ್‍ಐ ರವಿಕುಮಾರ್ ಪ್ರತಿಭಟನಾಕಾರರ ಮನ ಮನವೊಲಿಸಿ, ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಆದರೆ ಪಟ್ಟಣದ ವಿವಿಧ ಸಂಘಟನೆಗಳು ಸೋಮವಾರ ಬಂಗಾರಪೇಟೆ ಬಂದ್‍ಗೆ ಕರೆ ನೀಡಿದ್ದಾರೆ.