Connect with us

Bollywood

ವಿವಾದಗಳ ನಡುವೆ ಪದ್ಮಾವತಿ ರಿಲೀಸ್ ದಿನಾಂಕ ಬದಲಾಯ್ತು-ಸೆನ್ಸಾರ್ ಮಂಡಳಿಯಲ್ಲಿ ಅರ್ಜಿ ರಿಜೆಕ್ಟ್

Published

on

ಮುಂಬೈ: ವಿವಾದಗಳಿಂದ ಸುದ್ದಿಯಾಗಿದ್ದ ಬಾಲಿವುಡ್‍ನ ಪದ್ಮಾವತಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಸೆನ್ಸಾರ್ ಬೋರ್ಡ್ ನಲ್ಲಿ ಪದ್ಮಾವತಿ ಸಿನಿಮಾದ ಅರ್ಜಿ ತಿರಸ್ಕೃತವಾಗಿದ್ದು, ಚಿತ್ರತಂಡ ಅನಿವಾರ್ಯ ಕಾರಣಗಳಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದ್ದು, ಆದರೆ ಯಾವ ದಿನದಂದು ಸಿನಿಮಾ ತೆರೆಕಾಣಲಿದೆ ಎಂಬುದನ್ನು ಚಿತ್ರತಂಡ ಸ್ಪಷ್ಟಪಡಿಸಿಲ್ಲ.

ಕಳೆದ ಮೂರು ದಿನಗಳಿಂದ ಸಿನಿಮಾದ ರಿಲೀಸ್ ದಿನವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿತ್ತಿತ್ತು. ಆದರೆ ಅಧಿಕೃತವಾಗಿ ದೃಢಪಟ್ಟಿರಲಿಲ್ಲ. ಇಂದು ಬಾಲಿವುಡ್ ಸಿನಿ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮೂಲಕ ವಿಷಯವನ್ನು ಖಚಿತಪಡಿಸಿದ್ದಾರೆ.

ಸೆನ್ಸಾರ್ ಬೋರ್ಡ್ ಹೇಳಿದ್ದೇನು?:
ಸೆನ್ಸಾರ್ ಬೋರ್ಡ್ ಸಿನಿಮಾಗೆ ಅನುಮತಿ ಕೋರಿ ಚಿತ್ರತಂಡ ಅರ್ಜಿಯನ್ನು ಸಲ್ಲಿಸಿತ್ತು. ಆದರೆ ಚಿತ್ರತಂಡ ಅವಶ್ಯಕ ಮಾಹಿತಿಯನ್ನು ಅರ್ಜಿಯಲ್ಲಿ ದಾಖಲಿಸದೇ ಅಪೂರ್ಣವಾದ ಮಾಹಿತಿಯನ್ನು ಸಲ್ಲಿಸಿದೆ. ಇನ್ನೂ ಸಿನಿಮಾ ರಜಪೂತ ನಾಡಿದ ಧೀರ ಮಹಿಳೆ ರಾಣಿ ಪದ್ಮಾವತಿ ಐತಿಹಾಸಿಕ ಕಥೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಬಳಸಲಾಗಿರುವ ದೃಶ್ಯಗಳಿಗೆ ಸೂಕ್ತ ಸಾಕ್ಷ್ಯಗಳನ್ನು ನೀಡಿಲ್ಲ ಎಂದು ಸೆನ್ಸಾರ್ ಬೋರ್ಡ್ (ಸಿಬಿಎಫ್‍ಸಿ) ತಿಳಿಸಿ ಅರ್ಜಿಯನ್ನು ತಿರಸ್ಕರಿಸಿದೆ.

ಪದ್ಮಾವತಿ ಸಿನಿಮಾ ನಿರ್ಮಾಣ ಸಂಸ್ಥೆ ವೈಕಾಮ್ 18ಮೋಷನ್ ದಿನಾಂಕ ಮೂಂದೂಡಿರುವ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಹಾಗಾದರೆ ನಿರ್ಮಾಣ ಸಂಸ್ಥೆ ಮಾಧ್ಯಮಗಳಿಗೆ ತಿಳಿಸಿದ್ದು ಹೀಗೆ

“ಪದ್ಮಾವತಿ ಸಿನಿಮಾವನ್ನು ಡಿಸೆಂಬರ್ 1ರಂದು ತೆರೆಕಾಣಲು ಸಕಲ ತಯಾರಿಗಳನ್ನು ಮಾಡಿಕೊಂಡಿತ್ತು. ರಜಪೂತ ಸಂಸ್ಥಾನದ ಶೌರ್ಯ, ಘನತೆ ಮತ್ತು ಸಂಪ್ರದಾಯಿಕ ಎಲ್ಲ ವೈಭವವನ್ನು ಚಿತ್ರಕಥೆಯನ್ನು ಸಿನಿಮಾ ಒಳಗೊಂಡಿದೆ. ಚಿತ್ರಕಥೆ ನೋಡುಗರಿಗೆ ಹೆಮ್ಮೆಯನ್ನುಂಟು ಮಾಡಲಿದ್ದು, ಭಾರತೀಯರ ಸಾಹಸ ಪರಾಕ್ರಮವನ್ನು ಚಿತ್ರ ಒಳಗೊಂಡಿದೆ. ನಾವು ದೇಶದ ನಾಗರಿಕರಾಗಿದ್ದು, ದೇಶದ ಶಾಸನಬದ್ಧ ಕಾನೂನುಗಳನ್ನು ಪಾಲನೆ ಮಾಡುವುದರ ಜೊತೆಗೆ ಗೌರವ ನೀಡಬೇಕು. ಸೆನ್ಸಾರ್ ಬೋರ್ಡ್ ಸಿನಿಮಾಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಒದಗಿಸುವಂತೆ ತಿಳಿಸಿದೆ. ಹಾಗಾಗಿ ಬೋರ್ಡ್ ಕೇಳಿರುವ ದಾಖಲಾತಿಗಳನ್ನು ಒದಗಿಸಲು ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಸಿನಿಮಾ ತೆರೆಕಾಣುವ ದಿನಾಂಕವನ್ನು ಮುಂದೂಡಲಾಗಿದೆ. ಆದಷ್ಟು ಬೇಗ ಸಿನಿಮಾ ರಿಲೀಸ್ ದಿನಾಂಕವನ್ನು ಅಭಿಮಾನಿಗಳಿಗೆ ತಿಳಿಸಲಾಗುತ್ತದೆ. ನಮ್ಮ ಬ್ಯಾನರ್ ಅಡಿಯಲ್ಲಿ `ಟಾಯ್ಲೆಟ್ ಏಕ್ ಪ್ರೇಮ್ ಕಥಾ’, ಭಾಗ್ ಮಿಲ್ಕಾ ಭಾಗ್, ಕ್ವೀನ್ ಸೇರಿದಂತೆ ಯಶಸ್ವಿ ಸಿನಿಮಾಗಳು ತೆರೆಕಂಡಿವೆ.” ಎಂದು ತಿಳಿಸಿದೆ.


ಏನಿದು ವಿವಾದ?: ಪದ್ಮಾವತಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ವಿವಾದವು ಹುಟ್ಟಿಕೊಂಡಿದೆ. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮಾತ್ರ ಪದ್ಮಾವತಿ ನಡುವೆ ರೊಮ್ಯಾಂಟಿಕ್ ಸೀನ್ ಗಳಿವೆ. ಇನ್ನೂ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ರಾಣಿ ಪದ್ಮಾವತಿ ಕುರಿತಾಗಿ ಸಿನಿಮಾ ಮಾಡಲಿದ್ದೇನೆಂದು ಬನ್ಸಾಲಿ ಹೇಳಿಕೊಂಡಾಗ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.

ಬಿಜೆಪಿ, ಕಾಂಗ್ರೆಸ್ಸಿನಿಂದ ವಿರೋಧ: ಪದ್ಮಾವತಿ ಸಿನಿಮಾವನ್ನು ಗುಜರಾತಿನಲ್ಲಿ ಚುನಾವಣೆ ಬಳಿಕ ರಿಲೀಸ್ ಮಾಡಬೇಕು ಇಲ್ಲವೇ ಸಿನಿಮಾವನ್ನು ರಾಜ್ಯದಲ್ಲಿ ಬ್ಯಾನ್ ಮಾಡೋದು ಒಳ್ಳೆಯದು. ಸದ್ಯ ರಾಜ್ಯದಲ್ಲಿ ಚುನಾವಣೆಯ ಕಾವು ಹೆಚ್ಚಾಗಿರುವುದರಿಂದ ಸಿನಿಮಾದಿಂದಾಗಿ ಗಲಾಟೆಗಳು ಉಂಟಾಗಬಹುದು. ಒಂದು ವೇಳೆ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದ್ದರೆ ರಜಪೂತ ಮತ್ತು ಕ್ಷತ್ರೀಯ ಸಮುದಾಯದ ಜನತೆಯ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಬಿಜೆಪಿ ವಕ್ತಾರ ಜಡೇಜಾ ತಿಳಿಸಿದ್ದಾರೆ. ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ. ಹೀಗಾಗಿ ಜನರ ಭಾವನೆಗೆ ಧಕ್ಕೆ ಬಂದಿರುವ ವಿಚಾರವನ್ನು ತೆಗೆದು ಹಾಕಬೇಕೆಂದು ರಾಜಸ್ಥಾನದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯ ಸರ್ಕಾರಗಳು ಈಗಾಗಲೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ಅವರಿಗೆ ಸಿನಿಮಾ ಬಿಡುಗಡೆ ಕುರಿತು ಸ್ಪಷ್ಟಣೆ ಕೇಳಿ ಪತ್ರವನ್ನು ಬರೆದಿವೆ. ಸಿನಿಮಾ ಬಿಡುಗಡೆ ಆಗುವುದರಿಂದ ಯಾವುದೇ ಸಮುದಾಯದ ಜನರಿಗೆ ನೋವುಂಟು ಆಗಬಾರದು. ಈ ಹಿನ್ನೆಲೆಯಲ್ಲಿ ಪದ್ಮಾವತಿ ಸಿನಿಮಾ ಒಳಗೊಂಡಿರುವ ಕಥಾ ಹಂದರವನ್ನು ಪರಿಶೀಲಿಸಲು ಹಿರಿಯ ಇತಹಾಸ ತಜ್ಞರು, ಸಿನಿಮಾ ನಿರ್ಮಾಪಕರು ಒಳಗೊಂಡಿರುವ ಸಮಿತಿ ರಚಿಸಲಾಗುತ್ತಿದೆ ಎಂದು ಮಾಧ್ಯಮಗಳು ಪ್ರಕಟಿಸಿವೆ.

ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಯಾವುದೇ ರೊಮ್ಯಾಂಟಿಕ್ ಸೀನ್ ಗಳಿಲ್ಲ ಎಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಮತ್ತು ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ.

 

 

Click to comment

Leave a Reply

Your email address will not be published. Required fields are marked *