ತುಮಕೂರು: ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಕಾಮುಕ ಕಂಡಕ್ಟರ್ ಗೆ ಸಹಪ್ರಯಾಣಿಕರೆಲ್ಲರೂ ಸೇರಿ ಸಖತ್ ಗೂಸಾ ಕೊಟ್ಟಿರುವ ಘಟನೆ ತುಮಕೂರಿನ ಕುಣಿಗಲ್ ನಲ್ಲಿ ನಡೆದಿದೆ.
ಹೊಳೆನರಸೀಪುರ ಡಿಪೋ ಕಂಡಕ್ಟರ್ ಜವಾಹರ್ ಅಹಮದ್ ಪ್ರಯಾಣಿಕರಿಂದ ಗೂಸಾ ತಿಂದ ಕಂಡಕ್ಟರ್. ಹಾಸನದಿಂದ ಬೆಂಗಳೂರಿಗೆ ಹೊರಟ್ಟಿದ್ದ ಬಸ್ಸಿನಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ರೇಖಾ ಎಂಬ ಯುವತಿ ಹಾಸನದಿಂದ ಬಸ್ ಹತ್ತಿದ್ದಾರೆ. ಸೀಟ್ ಇಲ್ಲದೆ ಇದ್ದ ಕಾರಣ ನಿರ್ವಾಹಕನ ಸೀಟ್ ಪಕ್ಕದಲ್ಲಿ ಕುಳಿತಿದ್ದರು.
Advertisement
Advertisement
ಬಸ್ ಚನ್ನರಾಯಪಟ್ಟಣ ದಾಟಿ ಕುಣಿಗಲ್ ಕಡೆ ಬರುತ್ತಿದ್ದಂತೆ ಆರೋಪಿ ಜವಾಹರ್ ಬಸ್ ಲೈಟ್ ಆಫ್ ಮಾಡಿದ್ದಾನೆ. ಬಳಿಕ ಕತ್ತಲೆಯಲ್ಲಿ ಜವಾಹರ್ ಯುವತಿ ರೇಖಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ನಿರ್ವಾಹಕನ ವರ್ತನೆಗೆ ಪ್ರತಿರೋಧ ಒಡ್ಡಿ ಕಿರುಚಿಕೊಂಡಿದ್ದಾರೆ.
Advertisement
ಯುವತಿಯ ಕಿರುಚಾಟ ಕೇಳಿದ ತಕ್ಷಣ ಸಹಪ್ರಯಾಣಿಕರು ಯುವತಿ ನೆರವಿಗೆ ಬಂದು ಕಾಮುಕ ಕಂಡಕ್ಟರ್ ಗೆ ಥಳಿಸಿದ್ದಾರೆ. ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜವಾಹರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.