ಹಾಸನ: ಪ್ರಯಾಣಿಕರೊಬ್ಬರ ಮೇಲೆ ನಿರ್ವಾಹಕ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ನೂತನ ಬಸ್ ನಿಲ್ದಾಣದಲ್ಲಿ ಯುವಕನೋರ್ವನಿಗೆ ಬಸ್ ನಿರ್ವಾಹಕ ಹಲ್ಲೆ ಮಾಡಿದ್ದು, ಹಲ್ಲೆಗೆ ಖಚಿತ ಕಾರಣ ತಿಳಿದು ಬಂದಿಲ್ಲ. ಆದರೆ ಸಾರ್ವಜನಿಕರ ಮೇಲೆ ಸರ್ಕಾರಿ ಸಿಬ್ಬಂದಿಯೊಬ್ಬರು ಈ ರೀತಿ ಹಲ್ಲೆ ಮಾಡಿರುವ ಕುರಿತು ಸಾಕಷ್ಟು ವಿರೋಧ ಮತ್ತು ಆಕ್ರೋಶ ವ್ಯಕ್ತವಾಗಿದೆ.
ಬಸ್ ಹಾಸನದಿಂದ ಅರಕಲಗೂಡು ಕಡೆಗೆ ತೆರಳುವುದಕ್ಕೆ ನಿಂತಿತ್ತು. ಆ ಸಂದರ್ಭದಲ್ಲಿ ಈ ಹಲ್ಲೆ ನಡೆದಿದೆ. ಈ ಘಟನೆ ಬಗ್ಗೆ ಡಿಸಿ ಗಮನಕ್ಕೆ ಬಂದಿದ್ದು, ನಿರ್ವಾಹಕ ವಿರುದ್ಧ ಕ್ರಮ ತೆಗೆದುಕೊಳ್ಳುವುದ್ದಾಗಿ ಹೇಳಿದ್ದಾರೆ.
ಸದ್ಯ ನಿರ್ವಾಹಕ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ನಿರ್ವಾಹಕ ಮತ್ತು ಪ್ರಯಾಣಿಕರ ಮಾಹಿತಿ ತಿಳಿದು ಬಂದಿಲ್ಲ.