ಶ್ರಾವಣಮಾಸದ ಶ್ರವಣ ನಕ್ಷತ್ರದಂದು (Shravana Nakshatra) ಆಶ್ವಲಾಯನ ಮತ್ತು ಆಪಸ್ತಂಭ ಉಪಾಕರ್ಮ (Upakarma) ವ್ರತಗಳು ಬರುತ್ತವೆ. ಈ ದಿನ ಬೆಳಗ್ಗೆ ದೇವಸ್ಥಾನದಲ್ಲಿ ಸಾಮೂಹಿಕ ಹೋಮ, ಹವನಗಳನ್ನು ಮಾಡಿ ಮಂತ್ರಸಹಿತ ಜನಿವಾರಗಳನ್ನು ಧರಿಸುತ್ತಾರೆ. ಬ್ರಹ್ಮಚಾರಿಗಳು ಮೂರೆಳೆಯ, ಗೃಹಸ್ಥರು ಆರು ಅಥವಾ ಒಂಬತ್ತು ಎಳೆಯ ಜನಿವಾರಗಳನ್ನು ಹಾಕಿಕೊಂಡರೆ ಈ ದಿನ ದೇವರಿಗೂ ನೂತನ ಜನಿವಾರವನ್ನು ಹಾಕುತ್ತಾರೆ. ಜನಿವಾರವನ್ನು ಯಜ್ಞೋಪವೀತವೆಂದೂ, ಗಾಯತ್ರೀ ಎಂದು ಕರೆಯುತ್ತಾರೆ. ಗಾಯತ್ರೀ ಮಂತ್ರವನ್ನು ಜಪಿಸುತ್ತಾ ಜನಿವಾರ ಧರಿಸುವುದು ಕ್ರಮ. ಈ ಸಮಾರಂಭವನ್ನು ಜನಿವಾರದ ಹಬ್ಬ ಎಂದು ಕೆಲವು ಕಡೆಗಳಲ್ಲಿ ಕರೆಯಲಾಗುತ್ತದೆ. ಬ್ರಾಹ್ಮಣರು ಮಾತ್ರವಲ್ಲದೇ ಇತರ ಅನೇಕ ಸಮಾಜಗಳ ಜನರು ಸಹ ಯಜ್ಞೋಪವೀತವನ್ನು ಧರಿಸುತ್ತಾರೆ.
ಉಪಾಕರ್ಮ ಅಂದರೆ ಪ್ರಾರಂಭ ಅಥವಾ ಉಪಕ್ರಮ (ಜ್ಞಾನದ ಕುರಿತಾಗಿ ಸಾಗುವುದು/ ಉಪಕ್ರಮಿಸುವುದು) ಎಂದು ಅರ್ಥ. ಉಪನಯನ ಸಂಸ್ಕಾರವಾದವರೆಲ್ಲರೂ ಯಜ್ಞೋಪವೀತವನ್ನು ಧರಿಸುತ್ತಾರೆ. ಜನಿವಾರ ಧರಿಸುವವರು ಪ್ರತಿನಿತ್ಯ ಮೂರು ಬಾರಿ ಸಂಧ್ಯಾವಂದನೆ ಮಾಡಬೇಕು ಎಂಬುದು ವಿಧಿ. ಉಪನಯನ ಎಂದರೆ ಮತ್ತೊಂದು ಕಣ್ಣು ಎಂದರ್ಥ. ಈ ಮೂರನೇಯ ಕಣ್ಣು ಹೊರಗಿನ ಪ್ರಪಂಚದ ಜ್ಞಾನವನ್ನಷ್ಟೇ ಅಲ್ಲದೆ, ನಮ್ಮ ಬಗ್ಗೆ, ಆಂತರ್ಯದ ಕಣ್ಣನ್ನೂ ತೆರೆಸುತ್ತದೆ ಎಂಬುದು ಆಶಯ.
Advertisement
Advertisement
ಗಾಯತ್ರೀ ಮಂತ್ರ (Gayatri Mantra)ಬಹು ಶ್ರೇಷ್ಠವಾದುದು. ಇದರ ಸಾಧನೆಯಿಂದ ಬ್ರಹ್ಮನಿಗೆ ಸೃಷ್ಟಿ ನಿರ್ಮಾಣ ಶಕ್ತಿ ಪ್ರಾಪ್ತವಾಯಿತು. ತನ್ನ ನಾಲ್ಕು ಮುಖಗಳಿಂದ ನಾಲ್ಕು ವೇದಗಳನ್ನು ಬಿತ್ತರಿಸಿದನು. ಪ್ರಾಚೀನ ಋಷಿ ಮಹರ್ಷಿಗಳೆಲ್ಲರೂ ಈ ಮಂತ್ರದ ಮಹತ್ವವನ್ನು ಸಾಕ್ಷತ್ಕರಿಸಿಕೊಂಡಿದ್ದಾರೆ. ದೈವೀ ಅನುಭವವನ್ನು ಪಡೆದಿದ್ದಾರೆ. ಇದು ಸರ್ವ ಮಂತ್ರಗಳಲ್ಲಿಯೂ ಶ್ರೇಷ್ಠ ಮಂತ್ರ. ಗಾಯತ್ರೀ ಜಪದಿಂದ ಆಯಸ್ಸು, ವಿದ್ಯೆ, ಸಂತಾನ, ಕೀರ್ತಿ, ಲಾಭ ಮತ್ತು ಬ್ರಹ್ಮ ತೇಜಸ್ಸು ಪ್ರಾಪ್ತವಾಗುತ್ತದೆ. ಯಾವುದೇ ದುರ್ಗುಣಗಳು ದೂರವಾಗುತ್ತವೆ. ಸಂಯಮ, ಸತ್ಯನಿಷ್ಠೆ, ಧರ್ಮಶ್ರದ್ಧೆ ಮೊದಲಾದ ಸದ್ಗುಣಗಳು ಬೆಳೆಯುತ್ತವ ಎಂಬ ನಂಬಿಕೆಯಿದೆ. ಇದನ್ನೂ ಓದಿ: ಅಣ್ಣ-ತಂಗಿಯರ ಪವಿತ್ರ ಬಂಧವನ್ನು ಸಾರುವ ಹಬ್ಬವೇ ರಕ್ಷಾ ಬಂಧನ!
Advertisement
ಗಾಯತ್ರೀ ದೇವಿಯು ಭಗವಂತನ ಸ್ವರೂಪ, ಭಗವಂತನನ್ನು ಜಗನ್ಮಾತೆಯ ರೂಪದಲ್ಲಿ ಉಪಾಸನೆ ಮಾಡುವುದರಿಂದ, ಸಮಸ್ತ ನಾರೀಲೋಕದ ಬಗೆಗೂ ಪವಿತ್ರತೆ ಸದಾಚಾರ, ಸದ್ಭಾವನೆ ಮೂಡುತ್ತವೆ. ಗಾಯತ್ರೀ ಮಂತ್ರವು ಸಕಲ ಸದ್ಭಕ್ತರಿಗೆ ಕಲ್ಪತರು ಆಗಿದೆ; ಇಷ್ಟಾರ್ಥಗಳನ್ನು ಪೂರೈಸುವುದರಿಂದ ಕಾಮಧೇನುವೂ ಆಗಿದೆ. ಆತ್ಮಕಲ್ಯಾಣ ಹಾಗೂ ಲೋಕಕಲ್ಯಾಣಕರವಾದ ಈ ಮಹಾಮಂತ್ರವನ್ನು ಹಿಂದೆ ಋಷಿ-ಮರ್ಷಿಗಳು ಕೋಟಿಗಟ್ಟಲೆ ಜಪಮಾಡಿ ಸಿದ್ಧಿ ಪಡೆದಿದ್ದಾರೆ.
Advertisement
ಗಾಯತ್ರೀ ಮಹಾತ್ಮೆಯನ್ನು ಕೊಂಡಾಡುವ ಉಪಾಕರ್ಮದ ದಿನವನ್ನು ನೂಲು ಹುಣ್ಣಿಮೆ, ರಕ್ಷಾ ಪೂರ್ಣಿಮೆ ಎಂದೂ ಕರೆಯುತ್ತಾರೆ. ಆದಿಮಾನವ ಆದುನಿಕ ಮಾನವನಾಗುವಲ್ಲಿ ನೂಲು ಮಹತ್ವದ ಪಾತ್ರ ವಹಿಸಿದೆ. ತನ್ನ ಸೌಲಭ್ಯ, ಸೌಂದರ್ಯ ಸಾಧಕವಾದ ಈ ವಸ್ತ್ರ ಸಂಶೋಧನೆ ಕಲ್ಪನೆಗೆ ಕೃತಜ್ಞತೆಯನ್ನು ಸೂಚಿಸುವುದೇ ನೂಲು ಹುಣ್ಣಿಮೆ ಎಂಬ ಪದದ ಸಾಂಕೇತಿಕ ಅರ್ಥವಾಗಿರಬಹುದು.