– ರಾಜ್ಯ ಬಜೆಟ್‌ನಲ್ಲಿ ಪುತ್ತೂರು ಮೆಡಿಕಲ್ ಕಾಲೇಜು ಘೋಷಣೆ ಸ್ವಾಗತಾರ್ಹ
ಮಂಗಳೂರು: ರಾಜ್ಯ ಬಜೆಟ್‌ನಲ್ಲಿ ಪುತ್ತೂರು ಮೆಡಿಕಲ್ ಕಾಲೇಜು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ, ಕರಾವಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬೇಸರ ವ್ಯಕ್ತಪಡಿಸಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಖಾಸಗಿ ಕಾಲೇಜುಗಳ ಲಾಬಿ ಜೋರಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಸ್ವಾಗತಾರ್ಹ. ಈ ಮೂಲಕ ಜಿಲ್ಲೆಯ ಜನತೆಯ ಹಕ್ಕೊತ್ತಾಯಕ್ಕೆ ಸರ್ಕಾರ ಮನ್ನಣೆ ನೀಡಿದೆ. ಆದರೆ ಜಿಲ್ಲೆಯ ಇತರ ಕ್ಷೇತ್ರಗಳನ್ನು ರಾಜ್ಯ ಬಜೆಟ್‌ನಲ್ಲಿ ಎಂದಿನಂತೆ ಕಡೆಗಣಿಸಲಾಗಿದೆ. ಎಲ್ಲಾ ಬಜೆಟ್‌ನಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರ ಅನುಸರಿಸುತ್ತಿರುವ ಮಲತಾಯಿ ಧೋರಣೆ ಈ ಬಜೆಟ್‌ನಲ್ಲೂ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಸೇರಿದಂತೆ ಕರಾವಳಿಯನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸುವಂತೆ, ಅಡಿಕೆ ಬೆಲೆ, ಕಾನೂನು ಕಾಲೇಜು, ಪ್ರಮುಖವಾಗಿ ಪುತ್ತೂರು ಜಿಲ್ಲೆ ಘೋಷಣೆಯ ಬಗ್ಗೆಯೂ ಎಸ್‌ಡಿಪಿಐ ಹಕ್ಕೊತ್ತಾಯ ಹಾಗೂ ಮನವಿಗಳನ್ನು ಸಲ್ಲಿಸಿತ್ತು. ಇದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಬೇಡಿಕೆಯೂ ಆಗಿತ್ತು. ಆದರೆ ಅವುಗಳನ್ನು ನಿರಾಕರಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ನಿರಾಸೆ ಹುಟ್ಟಿಸಿದೆ ಎಂದಿದ್ದಾರೆ.
ಇತ್ತೀಚಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಾರ್ಕಳದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹಾಗೂ ಎರಡು ದಿನಗಳ ಹಿಂದೆ ಅಧಿವೇಶನದ ಚರ್ಚೆಯಲ್ಲೂ ಪ್ರವಾಸೋದ್ಯಮ ಕುರಿತು ಚರ್ಚೆ ಮಾಡಿದ್ದರು. ಹಾಗಾಗಿ ಕರಾವಳಿಯ ಜನತೆ ಈ ಬಾರಿಯ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಸರ್ಕಾರ ಹಣ ಮೀಸಲಿಡಲಿದೆ ಎಂದೇ ಭಾವಿಸಿದ್ದರು. ಆದರೆ ಇದು ಸುಳ್ಳಾಗಿದೆ. ಭೌಗೋಳಿಕ ದೃಷ್ಟಿಯಿಂದ ಪುತ್ತೂರನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಪ್ರಮುಖ ಬೇಡಿಕೆಯನ್ನು ಕೂಡ ಈ ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕರಾವಳಿ ಜನತೆಯ ಜೀವನಾಡಿಯಾದ ಅಡಿಕೆಗೆ ಎಲೆಚುಕ್ಕಿ, ಹಳದಿ ರೋಗ ಹಾಗೂ ಹವಾಮಾನದ ವೈಪರೀತ್ಯದಿಂದ ವರ್ಷ ಹೋದಂತೆ ಫಸಲು ಕಡಿಮೆಯಾಗುತ್ತಿದೆ. ಖರ್ಚು ವೆಚ್ಚಗಳು ಅಧಿಕ ವಾಗುತ್ತಿದೆ. ಹಾಗಾಗಿ ಅಡಿಕೆಗೆ ಬೆಂಬಲ ನೀಡಬೇಕೆಂಬ ಬೇಡಿಕೆಯನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ. ಈಗಾಗಲೇ ಪುತ್ತೂರಿಗೆ ಘೋಷಣೆಯಾದ ಮೆಡಿಕಲ್ ಕಾಲೇಜಿನ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಕೂಡಲೇ ಕಾರ್ಯರೂಪಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.