ಬೆಂಗಳೂರು: ಸೇನೆಯ ವಿಂಗ್ ಕಮಾಂಡರ್ ಮನೆ ಬಳಿಯ 10 ಅಡಿ ಎತ್ತರದ ಕಾಂಪೌಂಡ್ ಗೋಡೆ ಕುಸಿದು, ವ್ಯಕ್ತಿ ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಗರದ ಜಾಲಹಳ್ಳಿ ಬಳಿಯ ಅಯ್ಯಪ್ಪ ದೇವಸ್ಥಾನದ ಬಳಿ ನಡೆದಿದೆ.
ಪರಮೇಶ್ವರ್ ಸಾವನ್ನಪ್ಪಿದ್ದು ವರುಣ್ ಮತ್ತು ಕಲ್ಯಾಣಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಾಲಹಳ್ಳಿ ರಸ್ತೆಯಲ್ಲಿರುವ ಸೇನೆಯ ಆವರಣದಲ್ಲಿ ಈ ಘಟನೆ ನಡೆದಿದೆ.
ಸೇನೆಯ ಎತ್ತರದ ಕಾಂಪೌಂಡ್ ಬಿದ್ದ ತಕ್ಷಣ ಪರಮೇಶ್ವರ್ ಮೃತಪಟ್ಟಿದ್ದು ಗಂಭೀರವಾಗಿ ಗಾಯಗೊಂಡಿದ್ದ ವರುಣ್ ಮತ್ತು ಕಲ್ಯಾಣಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಪೌಂಡ್ ಕುಸಿಯುತ್ತಿದ್ದಂತೆ ಗೋಡೆ ಪಕ್ಕದಲ್ಲಿದ್ದ ಬೈಕ್‍ಗಳು ಗೋಡೆಯ ಅವಶೇಷಗಳಡಿ ಸಿಲುಕಿ ಸಂಪೂರ್ಣ ಜಖಂಗೊಂಡಿವೆ. ಘಟನೆ ನಡೆಯುತ್ತಿದಂತೆ ಸ್ಥಳೀಯರೇ ರಕ್ಷಣಾ ಕಾರ್ಯ ನಡೆಸಿದ್ದು, ಈ ಸಂಬಂಧ ಗಂಗಮ್ಮನಗುಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೊಮ್ಮಗನ ಹೆಸರಲ್ಲಿ ವಿಶೇಷ ಪೂಜೆ ಮಾಡಿಸೋದಾಗಿ ಕುಟುಂಬ ಹರಕೆ ಹೊತ್ತಿತ್ತು. ವಿಜಯದಶಮಿ ಹಬ್ಬದ ಪ್ರಯುಕ್ತ ಇಂದು ಕೆಆರ್ ಪುರದಿಂದ ಜಾಲಹಳ್ಳಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹರಕೆ ತೀರಿಸಲು ಕುಟುಂಬ ಸಮೇತರಾಗಿ ಬಂದಿದ್ದರು.
ಹರಕೆ ತೀರಿಸಿ, ಪೂಜೆ ನೆರವೇರಿಸಿ ಪರಮೇಶ್, ಕಲ್ಯಾಣಿ, ಪ್ರಸಾದ್, ವರುಣ್ ಹೊರ ಬಂದಿದ್ದರು. ಸೇನೆಯ ಕಾಂಪೌಂಡ್ ಬಳಿ ಪಾರ್ಕ್ ಮಾಡಿದ್ದ ಕಾರನ್ನು ತೆಗೆದುಕೊಂಡು ಬರಲು ಮಗ ಪ್ರಸಾದ್ ಹೋಗಿದ್ದ. ಈ ವೇಳೆ ಬಿಸಿಲು ಎಂಬ ಕಾರಣಕ್ಕೆ ಉಳಿದ ಮೂವರು ಗೋಡೆ ಬದಿಯ ನೆರಳಿಗೆ ಹೋಗಿದ್ದರು. ಈ ವೇಳೆ ಏಕಾಏಕಿ 10 ಅಡಿ ಎತ್ತರದ ಕಾಂಪೌಂಡ್ ಗೋಡೆ ಕುಸಿದಿದೆ.