ಸಂತೋಷ್ ಕೊಡಂಕೇರಿ ನಿರ್ದೇಶನದ `ರವಿಕೆ ಪ್ರಸಂಗ’ (Ravike Prasanga) ಇದೇ ತಿಂಗಳ 16ರಂದು ತೆರೆಗಾಣುತ್ತಿದೆ. ಇದೀಗ ಚಿತ್ರತಂಡ ಅತ್ಯಂತ ಕ್ರಿಯಾಶೀಲವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಹಂತದಲ್ಲಿ ಹೊರಬೀಳುತ್ತಿರುವ ಒಂದಷ್ಟು ವಿಚಾರಗಳು ರವಿಕೆ ಪ್ರಸಂಗದತ್ತ ಪ್ರೇಕ್ಷಕರು ತೀವ್ರವಾಗಿ ಕುತೂಹಲಗೊಳ್ಳುವಂತೆ ಮಾಡುತ್ತಿದೆ. ಈ ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ಗೀತಾ ಭಾರತಿ ಭಟ್ ನಿರ್ವಹಿಸಿದ್ದಾರೆ. ಬ್ರಹ್ಮಗಂಟು ಎಂಬ ಧಾರಾವಾಹಿಯಿಂದ ಪ್ರಸಿದ್ಧಿ ಪಡೆದುಕೊಂಡಿದ್ದ ಗೀತಾ, ರವಿಕೆ ಪ್ರಸಂಗದ ಮೂಲಕವೇ ಪೂರ್ಣ ಪ್ರಮಾಣದ ನಾಯಕಿಯಾಗಿದ್ದಾರೆ.
ಗೀತಾ ಭಾರತೀ ಭಟ್ ಅವರ ಛಲಗಾರಿಕೆ, ಜೀವನ ಪ್ರೀತಿ ಈಗಾಗಲೇ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿವೆ. ಬ್ರಹ್ಮಗಂಟು ಸೀರಿಯಲ್ಲಿನ ಸಂದರ್ಭದಲ್ಲಿಯೇ ಆಕೆ ಪ್ರತಿಭಾನ್ವಿತ ನಟಿಯಾಗಿ ಹೊರಹೊಮ್ಮಿದ್ದರು. ಇಂಥಾ ಗೀತಾ ಆ ನಂತರದಲ್ಲಿಯೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಖುದ್ದು ಅವರೇ ಖುಷಿಗೊಂಡು ನಾಯಕಿಯಾಗಿ ನಟಿಸಿರುವ ಚಿತ್ರ `ರವಿಕೆ ಪ್ರಸಂಗ’. ವಿಶೇಷವೆಂದರೆ, ನಿರ್ದೇಶಕ ಸಂತೋಷ್ ಕೊಡಂಕೇರಿ ಅವರ ಮಡದಿ ಪಾವನಾ ಸಂತೋಷ್ ಆ ಕಥೆ ಬರೆಯುವಾಗಲೇ ಮುಖ್ಯ ಪಾತ್ರಕ್ಕಗಿ ಅವರ ಮನಸಲ್ಲಿದ್ದದ್ದು ಇದೇ ಗೀತಾ ಭಾರತಿ ಭಟ್.
ಯಾವ ಕಲಾವಿದರ ಪಾಲಿಗಾದರೂ ತನಗೆಂದೇ ಪಾತ್ರ ಸೃಷ್ಟಿಯಾಗೋದು ಜೀವಮಾನವೆಲ್ಲ ಸ್ಮರಣೆಯಲ್ಲಿರುವ ವಿಚಾರ. ಅಂಥಾದ್ದೊಂದು ಖುಷಿ ಗೀತಾಗೆ ಸಿಕ್ಕಿದೆ. ಆರಂಭಿಕವಾಗಿ ಪಾವನಾ ಈ ಕಥೆ ಹೇಳಿದಾಗ, ತನ್ನ ಪಾತ್ರದ ಚಹರೆಗಳ ಬಗ್ಗೆ ತಿಳಿಸಿದಾಗಲೇ ಗೀತಾ ತಮ್ಮ ಪಾತ್ರದ ಬಗ್ಗೆ ಮೋಹಗೊಂಡಿದ್ದರಂತೆ. ಯಾಕೆಂದರೆ, ಪ್ರತೀ ಹೆಣ್ಣುಮಕ್ಕಳಿಗೂ ನೇರಾನೇರ ಕಾಡುವಂತೆ ಈ ಕಥೆ ರೂಪುಗೊಂಡಿದೆ ಎಂಬುದು ಗೀತಾ ಮಾತು. ರವಿಕೆ ಪ್ರಸಂಗ ಅಂದಾಕ್ಷಣವೇ ಕೆಲ ಮಂದಿಯ ಚಿತ್ತ ಎತ್ತೆತ್ತಲೋ ಹರಿದಾಡಬಹುದು. ಯಾಕೆಂದರೆ, ರವಿಕೆಯ ಸುತ್ತಾ ಅಂಥಾ ನೆಗೆಟಿವ್ ಶೇಡಿನ ಕಣ್ಣುಗಳು ಪಹರೆ ಕಾಯುತ್ತಿರುತ್ತವೆ.
ಆದರೆ, ಇದು ಭಾವುಕ ಜಗತ್ತಿನ ಒಳಗಣ್ಣಿಗೆ ನಿಲುಕುವ ಸೂಕ್ಷ್ಮ ಕಥೆ ಅನ್ನೋದರ ಸುಳಿವು ಟ್ರೈಲರ್ ಮೂಲಕ ಈಗಾಗಲೇ ಸಿಕ್ಕಿಬಿಟ್ಟಿದೆ. ಅದರಲ್ಲಿಯೇ ಗೀತಾ ಪಾತ್ರವೂ ಪ್ರೇಕ್ಷಕರೆದುರು ತೆರೆದುಕೊಂಡಿದೆ. ಸಾಮಾನ್ಯವಾಗಿ ಎಲ್ಲ ನಟ ನಟಿಯರಿಗೂ ಕೂಡಾ ಜೀವಮಾನದಲ್ಲಿ ಇಂಥಾದ್ದೊಂದು ಪಾತ್ರ ಮಾಡಬೇಕೆಂಬ ಆಸೆ ಇರುತ್ತದೆ. ಆದರೆ, ಗೀತಾ ಪಾಲಿಗೆ ಅಂಥಾದ್ದೊಂದು ಅವಕಾಶ ತಾನೇ ತಾನಾಗಿ ಹುಡುಕಿಕೊಂಡು ಬಂದಿದೆ. ಈ ಸಿನಿಮಾದ ಮೂಲಕವೇ ತನ್ನ ವೃತ್ತಿಬದುಕಿಗೆ ಮತ್ತಷ್ಟು ಆವೇಗ ಸಿಗುತ್ತದೆಂಬ ನಿರೀಕ್ಷೆ, ಈ ಸಿನಿಮಾ ಸಮಸ್ತ ಪ್ರೇಕ್ಷಕರಿಗೂ ಇಷ್ಟವಾಗಿ ಗೆಲ್ಲುತ್ತದೆಂಬ ಗಾಢ ನಂಬಿಕೆ ಗೀತಾರದ್ದು.
ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್, ಪ್ರವೀಣ್ ಅಥರ್ವ, ರಘು ಪಾಂಡೇಶ್ವರ್, ಖುಷಿ ಆಚಾರ್, ದರ್ಶಿನಿ, ಹನುಮಂತೇಗೌಡ, ಹನುಮಂತ ರಾವ್, ಆಶಾ ಸುಜಯ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಮುರಳೀಧರ ಎನ್ ಛಾಯಾಗ್ರಹಣ, ವಿಜಯ್ ಶರ್ಮಾ ಸಂಗೀತ, ರಘು ಶಿವರಾಮ್ ಸಂಕಲನ ವಿರುವ ರವಿಕೆ ಪ್ರಸಂಗಕ್ಕೆ ಶಾಂತನು ಮಹರ್ಶಿ, ನಿರಂಜನ್ ಗೌಡ, ಗಿರೀಶ್ ಎಸ್.ಎಂ, ಶಿವರುದ್ರಯ್ಯ ಎಸ್.ವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.