– ಉಡುಪಿ ಮಣಿಪಾಲ ಮೂಲದ ಆದಿತ್ಯ ರಾವ್
– 2018ರಲ್ಲಿ ಬಂಧನ, 2019ರಲ್ಲಿ ಬಿಡುಗಡೆ
ಬೆಂಗಳೂರು: ಮೆಕ್ಯಾನಿಕಲ್ ಎಂಜಿನಿಯರ್ ಓದಿದ್ದ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ಎಂಜಿನಿಯರ್ ಹುದ್ದೆಯ ಕನಸು ಹೊತ್ತಿದ್ದ. ಆದರೆ ಈ ಹುದ್ದೆ ಸಿಗದ್ದಕ್ಕೆ ಸಿಟ್ಟಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದಾನಾ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಈ ಹಿಂದೆ ನಡೆದ ಪ್ರಕರಣಗಳಿಂದಾಗಿ ಈಗ ಮತ್ತೆ ಈ ಪ್ರಶ್ನೆ ಎದ್ದಿದ್ದು, 2018ರಲ್ಲಿ ಆದಿತ್ಯ ರಾವ್ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ. ಈ ಪ್ರಕರಣದಲ್ಲಿ 9 ತಿಂಗಳು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ.
Advertisement
Advertisement
ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಆದಿತ್ಯ ರಾವ್, 2018 ರಲ್ಲಿ ನಾನು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ಆದರೆ ನನಗೆ ಉದ್ಯೋಗ ಸಿಕ್ಕಿರಲಿಲ್ಲ. ಇದಕ್ಕೆ ಸಿಟ್ಟಾಗಿ ನಾನು ಆಗಸ್ಟ್ ತಿಂಗಳಿನಲ್ಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದೆ ಎಂದು ಹೇಳಿ ತಪ್ಪೊಪ್ಪಿಕೊಂಡಿದ್ದ.
Advertisement
ಆದಿತ್ಯ ರಾವ್ ಇಂದು ಮುಂಜಾನೆ ಬೆಂಗಳೂರಿನಲ್ಲಿರುವ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಆಗಮಿಸಿ ಶರಣಾಗಿದ್ದು, ಈ ಪ್ರಕರಣದ ಸಂಬಂಧ ಎದ್ದಿದ್ದ ಎಲ್ಲ ಅನುಮಾನಗಳಿಗೆ ವಿಚಾರಣೆಯ ನಂತರ ಉತ್ತರ ಸಿಗಲಿದೆ.
Advertisement
ಶಂಕೆ ಇತ್ತು:
ಬಜ್ಪೆ ವಿಮಾನ ನಿಲ್ದಾಣದ ಸಿಸಿಟಿವಿಗಳನ್ನು ಪರಿಶೀಲಿಸಿದ ಮಂಗಳೂರು ಪೊಲೀಸರಿಗೆ ಆದಿತ್ಯ ರಾವ್ ಮೇಲೆ ಶಂಕೆ ವ್ಯಕ್ತವಾಗಿತ್ತು. ಈತನೇ ಕೃತ್ಯ ಎಸಗಿರಬಹುದು ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರಿಗೆ ಈತನ ಭಾವಚಿತ್ರವನ್ನು ಕಳುಹಿಸಿಕೊಟ್ಟಿದ್ದರು. ಶಂಕಿತ ಆರೋಪಿ ತುಳು ಮಾತನಾಡುತ್ತಿದ್ದ ಹಿನ್ನೆಲೆಯಲ್ಲಿ ಈತನೇ ಮತ್ತೊಮ್ಮೆ ಈ ಕೃತ್ಯ ಎಸಗಿರಬಹುದು ಎನ್ನುವುದಕ್ಕೆ ಪುಷ್ಠಿ ಸಿಕ್ಕಿತ್ತು.
ಉಡುಪಿ ಜಿಲ್ಲೆ ಮಣಿಪಾಲದ ಹುಡ್ಕೋ ಕಾಲೋನಿಯಲ್ಲಿ ವಾಸವಾಗಿದ್ದ ಆದಿತ್ಯ ರಾವ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದ. ಉದ್ಯೋಗ ಸಂಬಂಧ ಬೆಂಗಳೂರಿಗೆ ತೆರಳಿದ್ದ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ಕೆಲಸದ ಕನಸು ಹೊತ್ತಿದ್ದ. ಕೆಲಸ ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಮಂಗಳೂರಿನಲ್ಲಿ ತಂದೆ ಜೊತೆ ಕೆಲಕಾಲದಿಂದ ವಾಸವಾಗಿದ್ದ. ಈ ವೇಳೆ ಮದುವೆಯ ಸಮಯದಲ್ಲಿ ಊಟ ಬಡಿಸಲು ತೆರಳುತ್ತಿದ್ದ. ಇದರ ಜೊತೆಗೆ ಬಾಣಸಿಗನಾಗಿಯೂ ಕೆಲಸ ಮಾಡುತ್ತಿದ್ದ.
ಮಾನಸಿಕವಾಗಿ ಕುಗ್ಗಿದ್ದ:
ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗಬೇಕೆಂದು ಆಸೆ ಪಟ್ಟಿದ್ದ ಈತನಿಗೆ ಉದ್ಯೋಗ ಸಿಕ್ಕಿರಲಿಲ್ಲ. ಉದ್ಯೋಗ ಸಿಗದ ಕಾರಣ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗದ ಕಾರಣ ಆತ ಸಿಟ್ಟಾಗಿದ್ದ. ಈ ಕಾರಣಕ್ಕೆ ನಾನು ಹುಸಿ ಬಾಂಬ್ ಕರೆ ಮಾಡಿದ್ದೆ ಎಂದು ಪೊಲೀಸ್ ವಿಚಾರಣೆಯಲ್ಲಿ ಆದಿತ್ಯ ರಾವ್ ತಿಳಿಸಿದ್ದ. ಇಲ್ಲಿಯವರೆಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದ ಈತ ಈ ಬಾರಿ ಬ್ಯಾಗಿನಲ್ಲಿ ಬಾಂಬ್ ಇಟ್ಟಿದ್ದು ಯಾಕೆ ಎನ್ನುವ ಪ್ರಶ್ನೆಗೆ ಪೊಲೀಸ್ ತನಿಖೆಯ ವೇಳೆ ಉತ್ತರ ಸಿಗಲಿದೆ.