ಬೆಂಗಳೂರು: ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಹೊಂದಾಣಿಕೆ ಮಾಡುವಂತೆ ಕೋರಿ ಸೋಮವಾರ ತಡ ರಾತ್ರಿ ಕಾಂಗ್ರೆಸ್ ನಾಯಕರು ಮುಖ್ಯ ಚುಣಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಚುಣಾವಣೆ ಮುಕ್ತಾಯವಾಗಿದ್ದು, ಇಂದು ಮತ ಎಣಿಕೆ ಇರುವ ಹಿನ್ನೆಲೆ ತಡರಾತ್ರಿ ಕಾಂಗ್ರೆಸ್ ನಾಯಕರು ಚುಣಾವಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡ ಉಗ್ರಪ್ಪ ನೇತೃತ್ವದಲ್ಲಿ ಮನವಿ ಮಾಡಿಕೊಂಡಿದ್ದು, ಅವರಿಗೆ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡುರಾವ್, ಕೃಷ್ಣ ಬೈರೆಗೌಡ ಹಾಗೂ ರಿಜ್ವಾನ್ ಅರ್ಷದ್ ರವರು ಸಾಥ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಉಗ್ರಪ್ಪ, ಈಗಾಗಲೇ ಬಿಜೆಪಿ ಪಕ್ಷದ ನಾಯಕ ಜಗದೀಶ್ ಶೆಟ್ಟರ ಇವಿಎಂ ಮಶಿನ್ ಟ್ಯಾಂಪರಿಂಗ್ ಕುರಿತು ಹೇಳಿಕೆ ನೀಡಿದ್ದಾರೆ. ಇದು ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸಿದ್ದು, ಮಂಗಳವಾರ ನಡೆಯುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಶೇ.100ರಷ್ಟು ಹೊಂದಾಣಿಕೆ ಮಾಡುವಂತೆ ಮನವಿ ಮಾಡಿದ್ದೇವೆ.
Advertisement
Advertisement
ಬದಾಮಿಯಲ್ಲಿನ ಲಾಡ್ಜ್ ವೊಂದರಲ್ಲಿ ಅಂಚೆ ಮತ ಪತ್ರ ಸಿಕ್ಕಿರುವ ಕುರಿತು ಇದೀಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಕೂಡ ನಿಷ್ಪಕ್ಷಪಾತ ತನಿಖೆ ಆಗುವಂತೆ ಕೋರಿದ್ದೇವೆ ಎಂದು ತಿಳಿಸಿದ್ರು.
Advertisement
ಇದೇ ವೇಳೆ ಮಾತನಾಡಿದ ಚುಣಾವಣಾ ಮುಖ್ಯಾಧಿಕಾರಿ ಸಂಜೀವಕುಮಾರ್, ಬದಾಮಿಯಲ್ಲಿ ಸಿಕ್ಕಿರುವ ಅಂಚೆ ಮತ ಪತ್ರದ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬದಾಮಿಯಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸರು ಲಾಡ್ಜ್ ನಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಂಚೆ ಮತ ಪತ್ರ ದ ಕುರಿತು ಮಾಹಿತಿ ಇರುವ ಎರಡು ಪೇಜ್ ಗಳು ಮಾತ್ರ ಲಭ್ಯವಾಗಿದ್ದು, ಯಾವುದೇ ಅಂಚೆ ಮತ ಪತ್ರಗಳು ಲಭ್ಯವಾಗಿಲ್ಲ ಅಂದ್ರು.
Advertisement
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬದಾಮಿ ಪೊಲೀಸರು ಸುದ್ದಿ ಪ್ರಸಾರ ಮಾಡಿದ್ದ ಪತ್ರಕರ್ತರನ್ನ ಪ್ರಶ್ನೆ ಮಾಡಲಾಗಿಯೂ ಕೂಡ ಯಾವುದೇ ಸಮರ್ಪಕ ಉತ್ತರ ಲಭಿಸಿರುವುದಿಲ್ಲ. ಹೀಗಾಗಿ ಇದು ಕೇವಲ ಗಾಳಿ ಸುದ್ದಿಯಾಗಿದ್ದು ಮಂಗಳವಾರ ಮತ ಎಣಿಕೆ ಇರುವುದರಿಂದ ಇಂತಹ ಗಾಳಿ ಸುದ್ದಿಗಳನ್ನ ಹಬ್ಬಿಸಬೇಡಿ. ಇನ್ನು ಇವಿಎಂ ಮಶಿನ್ ಮತ್ತು ವಿವಿಪ್ಯಾಟ್ ಗಳನ್ನ ಹೊಂದಾಣಿಕೆ ಮಾಡುವ ಕುರಿತು ಈಗಾಗಲೇ ಕಾಂಗ್ರೆಸ್ ನಾಯಕರು ಮನವಿ ಮಾಡಿಕೊಂಡಿದ್ದು ನಾವು ಪ್ರತಿ ಕ್ಷೇತ್ರದಲ್ಲಿ ರಾಂಡಮ್ ಆಗಿ ಹೊಂದಾಣಿಕೆ ಮಾಡುತ್ತೇವೆ ಎಂದರು.