ಬೆಂಗಳೂರು: ದುನಿಯಾ ವಿಜಯ್ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ತಲ್ವಾರ್ ಬಳಸಿ ಕೇಕ್ ಕಟ್ ಮಾಡುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ. ವಿಜಯ್ ಅವರ ಈ ಕೆಲಸಕ್ಕೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ತಲ್ವಾರ್ ಬಳಸಿ ಕೇಕ್ ಕಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರದ ಸ್ಥಳೀಯರು ದುನಿಯಾ ವಿಜಯ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ನಗರ ಪೊಲೀಸ್ ಆಯುಕ್ತರಿಗೆ ಫೇಸ್‍ಬುಕ್‍ನಲ್ಲಿ ಟ್ಯಾಗ್ ಮಾಡುವ ಮೂಲಕ ದೂರು ನೀಡಿದ್ದಾರೆ. ಇದನ್ನೂ ಓದಿ: ದುನಿಯಾ ವಿಜಿ 46ನೇ ಬರ್ತ್ ಡೇಯಲ್ಲಿ ಅವಾಂತರ- ತಲ್ವಾರ್‌ನಲ್ಲಿ ಕೇಕ್ ಕಟ್ ಮಾಡಿದ ನಟ
ರಾತ್ರಿ ಎರಡು ಗಂಟೆಯಾದರೂ ಜನರನ್ನು ಸೇರಿಸಿಕೊಂಡು ಶಬ್ದ ಮಾಡಿ ಗಲಾಟೆ ಮಾಡಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಓಡಾಟಕ್ಕೂ ತೊಂದರೆ ನೀಡಿದ್ದಾರೆ. ಧ್ವನಿ ವರ್ಧಕಗಳನ್ನು ಬಳಸಿ ಅಕ್ಕಪಕ್ಕ ಮನೆಯವರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ನನ್ನ ಗಮನಕ್ಕೆ ಬಾರದೇ ಎಡವಟ್ಟಾಗಿದೆ ಕ್ಷಮಿಸಿ: ವಿಜಯ್
ಸ್ಥಳೀಯರು ದೂರು ನೀಡಿದ ಹಿನ್ನಲೆ ಗಿರಿನಗರ ಠಾಣಾ ಪೊಲೀಸರು ಸ್ವಯಂಪ್ರೇರಿತ ಕೇಸ್ ಹಾಗೂ ಐಪಿಸಿ ಸೆಕ್ಷನ್ 283 ಅಡಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಕೇಸ್ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಅನುಮತಿ ಇಲ್ಲದೇ ತಡರಾತ್ರಿವರೆಗೂ ಧ್ವನಿವರ್ಧಕ ಬಳಸಿ, ರಸ್ತೆಯಲ್ಲಿ ಸಂಚಾರಕ್ಕೂ ಅಡಚಣೆ ಮಾಡಿದ್ದಾರೆ. ಗುಂಪು ಸೇರಿಸಿ ಅಕ್ಕಪಕ್ಕದ ಸ್ಥಳೀಯರಿಗೆ ತೊಂದರೆ ಉಂಟು ಮಾಡಿದ ಆರೋಪದ ಮೇಲೆ ಪೊಲೀಸರು ವಿಜಯ್ ಅವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ದುನಿಯಾ ವಿಜಯ್‍ಗೆ ಪೊಲೀಸರು ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.
ದುನಿಯಾ ವಿಜಯ್ ಅವರ ಹುಟ್ಟುಹಬ್ಬದಿಂದ ಜನರು ಬೇಸತ್ತು ಹೋಗಿದ್ದಾರೆ. ಹೀಗಾಗಿ ಹುಟ್ಟುಹಬ್ಬದ ನೆಪದಲ್ಲಿ ಅಭಿಮಾನಿಗಳು ಕಿರಿಕ್ ಮಾಡುತ್ತಾರೆ. ಇಡೀ ರಾತ್ರಿ ದಾಂಧಲೆ ಮಾಡಿದ್ದು, ನೆಮ್ಮದಿಯಿಂದ ನಿದ್ರೆ ಮಾಡುವುದಕ್ಕೆ ಆಗಲ್ಲ. ಪೊಲೀಸರಿಗೆ ಹೇಳಿದ್ರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಜಯ್ ಅವರ ಅಕ್ಕಪಕ್ಕದ ಮನೆಯವರು ಫೇಸ್‍ಬುಕ್‍ನಲ್ಲಿ ದೂರು ನೀಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.