ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರ ಕುರಿತು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿರುದ್ಧ ರಾಯಚೂರಿನಲ್ಲಿ ದೂರು ನೀಡಲಾಗಿದೆ.
ಸಂವಿಧಾನಿಕ ಹಕ್ಕು ನಾಗರೀಕ ಸಮಿತಿಯ ಮಾನಸಯ್ಯ ಎಂಬವರು ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿಎಎ ವಿರೋಧಿ ಹೋರಾಟಗಾರರು ಸೋಮಶೇಖರ್ ರೆಡ್ಡಿ ಹೇಳಿಕೆ ಖಂಡಿಸಿ ಪೊಲೀಸ್ ಠಾಣೆ ಮಟ್ಟಿಲು ಹತ್ತಿದ್ದಾರೆ. ಸಿಎಎ ಪರ ಮೆರವಣಿಗೆಯಲ್ಲಿ ಸೋಮಶೇಖರ್ ರೆಡ್ಡಿ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು. ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಸಮರ್ಥಿಸಿಕೊಂಡು ಸಿಎಎ ವಿರೋಧಿಸುವವರ ವಿರುದ್ದ ಕಿಡಿಕಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ದೂರಿನಲ್ಲೇನಿದೆ?
ನೀವು ಇರೋದು 17%. ಹಾಗಾಗಿ ನಾವು ಹೇಳಿದಂತೆ ಕೇಳಿಕೊಂಡಿರಿ. ಇಲ್ಲದಿದ್ದರೆ ನಿಮ್ಮನ್ನು ಉಳಿಸಲ್ಲ. ಮಚ್ಚು ಖಡ್ಗ ಹಿಡಿದು ರಣರಂಗ ಮಾಡ್ತೀವಿ. ನಮ್ಮ ಪದ್ಧತಿ ಪ್ರಕಾರ ಇರಬೇಕು. ಹೆಚ್ಚಿಗೆ ನಕರಾ ಮಾಡಿದರೆ ನಿಮ್ಮ ದೇಶಕ್ಕೆ ಕಳುಹಿಸಿಕೊಡಬೇಕಾಗುತ್ತದೆ. ಒಬ್ಬೊಬ್ಬ ಹಿಂದೂ ಒಬ್ಬೊಬ್ಬ ಶಿವಾಜಿ ತರಹ ಆಗಿ ಮಚ್ಚು ಹಿಡಿದುಕೊಂಡರೆ ರಣರಂಗ ಸೃಷ್ಟಿಯಾಗುತ್ತೆ. ಬಳ್ಳಾರಿ ದುರ್ಗಮ್ಮ ದರ್ಶನ ಮಾಡಿಕೊಂಡು ಖಡ್ಗ ಹಿಡಿದುಕೊಂಡರೆ ರಣರಂಗ ಸೃಷ್ಟಿಯಾಗುತ್ತದೆ ಎಂದು ಅಲ್ಲಿ ಸೇರಿದ್ದ ಸಾವಿರಾರು ಜನರನ್ನು ಭಾಷಣದ ಮೂಲಕ ಪ್ರಚೋದಿಸಿದ್ದಾರೆ. ಈ ಮೂಲಕ ಸಮಾಜದಲ್ಲಿ ಭಯೋತ್ಪಾದನೆ ಹರಡುವ ಸಂಘಟಿತ ಸಶಸ್ತ್ರ ದಾಳಿಗೆ ಸೋಮಶೇಕರರೆಡ್ಡಿ ಕರೆ ನೀಡಿದ್ದಾರೆ. ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಂಡು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಅಂತ ದೂರಿನಲ್ಲಿ ಮನವಿ ಮಾಡಲಾಗಿದೆ.
ರಾಯಚೂರಿನ ಸದರಬಜಾರ್ ಠಾಣೆ ಪೊಲೀಸರು ದೂರನ್ನ ಸ್ವೀಕರಿಸಿದ್ದು, ಇನ್ನೂ ಎಫ್ ಐ ಆರ್ ದಾಖಲಾಗಿಲ್ಲ.