ಮಂಡ್ಯ: ಶಾಸಕ ಚಲುವರಾಯಸ್ವಾಮಿ ಅಣ್ಣನ ಮಗನಾಗಿರುವ ಮಂಡ್ಯ ಡಿಎಚ್‍ಓ ಡಾಕ್ಟರ್ ಮೋಹನ್ ತಮಗಿರುವ ರಾಜಕೀಯ ಪ್ರಭಾವದಿಂದ ಕೋಟ್ಯಾಂತರ ರೂಪಾಯಿ ಅಕ್ರಮದಲ್ಲಿ ತೊಡಗಿದ್ದು, ಅವರ ವಿರುದ್ಧ ತನಿಖೆ ನಡೆಸುವಂತೆ ಆರ್‍ಟಿಐ ಕಾರ್ಯಕರ್ತ ರವೀಂದ್ರ ಎಂಬವರು ಎಸಿಬಿಗೆ ದೂರು ನೀಡಿದ್ದಾರೆ.
ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸರ್ಕಾರದ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗವಾಗುತ್ತಿದೆ. ಸಿಸಿಟಿವಿ ಖರೀದಿ, ಬೋಗಸ್ ಬಿಲ್ಲು, ಆಸ್ಪತ್ರೆಗಳಿಗೆ ಖರೀದಿಸಿರುವ ಸಾಧನ, ಸಲಕರಣೆ ಸ್ವೀಕೃತವಾಗದಿದ್ದರೂ ಹಣ ಬಿಡುಗಡೆ. ಇನ್ನು ಹಾಸಿಗೆ, ದಿಂಬು ರಿಪೇರಿಯಲ್ಲಿ ಅಕ್ರಮ ಸೇರಿದಂತೆ ಡಿಎಚ್‍ಓ ಮೋಹನ್ ಇತರೆ ಅಧಿಕಾರಿಗಳೊಂದಿಗೆ ಸೇರಿ ಕೋಟ್ಯಾಂತರ ರೂಪಾಯಿ ಅಕ್ರಮ ನಡೆಸಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತ ರವೀಂದ್ರ ಆರೋಪ ಮಾಡುತ್ತಿದ್ದಾರೆ.
ಸಹಾಯಕ ಆಡಳಿತಾಧಿಕಾರಿ ಸಾವಿತ್ರಮ್ಮ, ಈ ಹಿಂದಿನ ಕಚೇರಿ ಅಧೀಕ್ಷಕರಾಗಿದ್ದ ರವಿಕುಮಾರ್, ಶುಶ್ರೂಶಣಾದಾದಿ ಕೆಎನ್.ಪ್ರಶಾಂತ್, ಮಂಡ್ಯ ಸಹಾಯಕ ಖಜನಾಧಿಕಾರಿ ಜೈರಾಮ, ಜಿಲ್ಲಾ ಖಜಾನೆ ಉಪ ನಿರ್ದೇಶಕ ಜಿ.ಬಿ ರಾಜೇಗೌಡ ಎಂಬವರು ಡಿಎಚ್‍ಓ ಅಕ್ರಮಗಳ ಜೊತೆ ಶಾಮೀಲಾಗಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತ ಆರೋಪ ಮಾಡುತ್ತಿದ್ದಾರೆ. ಡಿಎಚ್‍ಓ ಮೋಹನ್ ವಿರುದ್ಧ ಈ ಹಿಂದೆಯೂ ದೂರು ಕೇಳಿ ಬಂದಿದ್ದವು. ಆದರೆ ಡಿಎಚ್‍ಓ ಮೋಹನ್ ನಾಗಮಂಗಲ ಶಾಸಕರಾಗಿರುವ ಚಲುವರಾಯಸ್ವಾಮಿಯವರ ಅಣ್ಣನ ಮಗನಾಗಿದ್ದಾರೆ. ತಮ್ಮ ರಾಜಕೀಯ ಪ್ರಭಾವದಿಂದ ಚಲುವರಾಯಸ್ವಾಮಿಯವರು ಡಿಎಚ್‍ಓ ಅಕ್ರಮಗಳಿಗೆ ಬೆಂಬಲವಾಗಿ ನಿಂತಿದ್ದಾರೆ.
ಹೀಗಾಗಿ ಸರ್ಕಾರ ಮತ್ತು ಮೇಲಾಧಿಕಾರಿಗಳು ಮೋಹನ್ ವಿರುದ್ಧ ಕ್ರಮ ಜರುಗಿಸಲು ವಿಫಲವಾಗಿದೆ. ಈಗಲಾದರೂ ರಾಜಕೀಯ ಪ್ರಭಾವಕ್ಕೆ ಮಣಿಯದೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು, ಆರ್‍ಟಿಐ ಕಾರ್ಯಕರ್ತ ರವೀಂದ್ರ ಭ್ರಷ್ಟಚಾರ ನಿಗ್ರಹದಳಕ್ಕೆ ಮನವಿ ಮಾಡಿದ್ದಾರೆ.