Thursday, 19th July 2018

Recent News

ನೋಟ್ ಬ್ಯಾನ್ ಅವಧಿಯಲ್ಲಿ 2 ಸಾವಿರ ಕೋಟಿ ರೂ. ಬದಲಾವಣೆ ಮಾಡಿಸಿದ್ರಂತೆ ಡಿಕೆಶಿ: ಇಡಿಯಲ್ಲಿ ದೂರು

ಬೆಂಗಳೂರು/ನವದೆಹಲಿ:ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಸಂಪೂರ್ಣ ವ್ಯವಹಾರವನ್ನು ಜಾಲಾಡುತ್ತಿದ್ದಾರೆ. ಬುಧವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿರುವ ಐಟಿ ರೇಡ್ ಗುರುವಾರ ರಾತ್ರಿಯೂ ಕೂಡ ಮುಂದುವರಿದಿದೆ. ಡಿಕೆ ಶಿವಕುಮಾರ್ ಭಾರತದಲ್ಲಿ ಮಾತ್ರವಲ್ಲದೆ ಲಂಡನ್, ಸಿಂಗಾಪುರ್‍ನಲ್ಲೂ ಶಿವಕುಮಾರ್ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿ ಹೂಡಿಕೆ ಮಾಡಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.

ಇವತ್ತು ಡಿಕೆಶಿ ಆಪ್ತರನ್ನೂ ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ರು. ಶರ್ಮಾ ಟ್ರಾವೆಲ್ಸ್ ಮಾಲೀಕ ಸುರೇಶ್ ಶರ್ಮಾ ಅವರ ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್ ನಾಯಕ ಡಿಪಿ ಶರ್ಮಾ ಅವರ ಪುತ್ರರಾಗಿರುವ ಸುರೇಶ್ ಶರ್ಮಾ ಡಿಕೆಶಿ ಆಪ್ತರಾಗಿದ್ದಾರೆ. ಇನ್ನೂ ಗ್ಲೋಬಲ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಕೇರ್ ಟೇಕರ್ ನಂದೀಶ್ ಮನೆ ಮೇಲೂ ದಾಳಿ ನಡೆದಿದ್ದು ಸುಮಾರು 11 ಕೆಜಿ ಚಿನ್ನಾಭರಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಜರಾಜೇಶ್ವರಿ ನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ಒಡೆತನದ ಇಂಟರ್‍ನ್ಯಾಷನಲ್ ಶಾಲೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಲ್ಲಿಯವರೆಗೂ ಒಟ್ಟು 10ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಆಪ್ತರು, ಸಂಬಂಧಿಕರ ಹೆಸರಿನಲ್ಲಿ ಇರುವ ಬೇನಾಮಿ ಆಸ್ತಿಗಳನ್ನು ಪತ್ತೆ ಮಾಡಿದ್ದಾರೆ. ಐಟಿ ಅಧಿಕಾರಿಗಳಿಗೆ ಇಲ್ಲೀವರೆಗೂ 10 ಕೋಟಿಗೂ ಹೆಚ್ಚು ನಗದು ಸಿಕ್ಕಿದೆ ಅನ್ನೋ ಮಾಹಿತಿ ಸಿಕ್ಕಿದೆ. ಈಗಾಗಲೇ 20 ಕಡೆ ನಡೆದ ದಾಳಿ ಮುಕ್ತಾಯವಾಗಿದೆ. ಇದರ ಜೊತೆಗೆ 2 ಸಾವಿರ ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ)ಯಲ್ಲಿ ದೂರು ದಾಖಲಾಗಿದೆ. ಮಹಾಲಕ್ಷ್ಮೀ ಲೇಔಟ್‍ನ ನಿವಾಸದಲ್ಲಿ ನೋಟ್ ಬ್ಯಾನ್ ಬಳಿಕ ಈ ವ್ಯವಹಾರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಡಿಗೆ ನೀಡಿರುವ ದೂರಿನಲ್ಲಿರುವ ಆರೋಪಗಳೇನು?
ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಸಾವಿರಾರು ಕೋಟಿ ರೂ. ಹಣವನ್ನು ಡಿಸೆಂಬರ್- ಜನವರಿ ಅವಧಿಯಲ್ಲಿ ಬದಲಾವಣೆ ಮಾಡಿದ್ದಾರೆ. ತಮ್ಮ ಕ್ಷೇತ್ರದ ಜನರಿಗೆ ಸುಮಾರು 2 ಲಕ್ಷ ರೂ. ಹಣವನ್ನು ಹಂಚಿದ್ದಾರೆ. ಸಚಿನ್ ನಾರಾಯಣ್ ಮೂಲಕ ಸುಮಾರು 2 ಸಾವಿರ ಕೋಟಿ ರೂ. ಹೊಸ ನೋಟುಗಳನ್ನು ಪಡೆದುಕೊಂಡಿದ್ದಾರೆ.

ಜ್ಯೋತಿಷಿ ದ್ವಾರಕಾನಾಥ್ ಅವರು ಹವಾಲ ಏಜೆಂಟ್ ಆಗಿದ್ದು, ಈ ವ್ಯಕ್ತಿಯ ಮೂಲಕ ಡಿಕೆ ಶಿವಕುಮಾರ್ ಹಣವನ್ನು ವರ್ಗಾವಣೆ ಮಾಡುತ್ತಿದ್ದರು. ಕಪ್ಪು ಹಣವನ್ನು ದ್ವಾರಕಾನಾಥ್ ಮೂಲಕ ತಮಗೆ ಬೇಕಾದ ಉದ್ಯಮಿಗಳಿಗೆ, ವ್ಯಕ್ತಿಗಳಿಗೆ ತಲುಪಿಸುತ್ತಿದ್ದರು.

ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಪೈಕಿ ಹಲವು ಮಂದಿ ದ್ವಾರಕಾನಾಥ್ ಮನೆಗೆ ಬರುತ್ತಿದ್ದರು. ಕೆಎಲ್ ಮಂಜುನಾಥ್, ಎನ್ ಕುಮಾರ್ ಸೇರಿದಂತೆ ಹಲವು ಮಂದಿ ಜಡ್ಜ್ ಗಳನ್ನು ದ್ವಾರಕಾನಾಥ್ ನಿಯಂತ್ರಿಸುತ್ತಿದ್ದರು. ಫೋನ್ ಕರೆಗಳ ಪರಿಶೀಲನೆ ನಡೆಸಿದಾಗ ದ್ವಾರಕನಾಥ್ ಪ್ರತಿದಿನ ಕೆಎಲ್ ಮಂಜುನಾಥ್ ಅವರ ಮನೆಗೆ ಹೋಗಿ ಹೈಕೋರ್ಟ್ ಕೇಸ್ ಗಳ ಬಗ್ಗೆ ಚರ್ಚಿಸಿ ತಮ್ಮ ಆಪ್ತರ ಪರವಾಗಿ ಬರುವಂತೆ ನೋಡಿಕೊಳ್ಳುತ್ತಿದ್ದರು.

ಸಾವಿರಾರು ಕೋಟಿ ಎಲೆಕ್ಟ್ರಿಕಲ್ ಗುತ್ತಿಗೆಗಳನ್ನು ಏಷ್ಯನ್ ಫ್ಯಾಬ್ ಟೆಕ್ ಕಂಪೆನಿಗೆ ನೀಡಲಾಗಿದೆ. ಈ ಕಂಪೆನಿಯ ಮಾಲೀಕ ಪುಟ್ಟಸ್ವಾಮಿ ಗೌಡ ಆಗಿದ್ದು, ಇವರು ಡಿಕೆ ಶಿವಕುಮಾರ್ ಅವರ ಹೂಡಿಕೆಯ ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ. ಹಣಕಾಸು ಅಕ್ರಮ ಆರೋಪ ಬಂದ ಹಿನ್ನೆಲೆಯಲ್ಲಿ ಪುಟ್ಟಸ್ವಾಮಿ ಗೌಡ ಅವರ ನಿವಾಸದ ಮೇಲೆ ಜನವರಿ ಐಟಿ ದಾಳಿ ಆಗಿದೆ.

ದೆಹಲಿಯಲ್ಲಿರುವ ಹಲವು ಕಾಂಗ್ರೆಸ್ ನಾಯಕರಿಗೆ ಡಿಕೆ ಶಿವಕುಮಾರ್ ಅವರು ತಮ್ಮ ಆಪ್ತ ಸಹಾಯಕನಾಗಿರುವ ಶ್ರೀಧರ್ ಮೂಲಕ ನೂರಾರು ಕೋಟಿ ರೂ. ಹಣವನ್ನು ಸಂದಾಯ ಮಾಡಿದ್ದಾರೆ. ತುಮಕೂರಿನ ಪಾವಗಡದಲ್ಲಿ ಮೆಗಾ ಸೋಲಾರ್ ಘಟಕ ನಿರ್ಮಾಣವಾಗುತ್ತಿದೆ. ಈ ಘಟಕ ನಿರ್ಮಾಣಕ್ಕೆ ರೈತರಿಗೆ ಹೆದರಿಸಿ ಬಲವಂತವಾಗಿ ಜಮೀನು ಖರೀದಿಸಲಾಗಿದೆ. ಈ ಎಲ್ಲ ಜಮೀನು ಡಿಕೆ ಶಿವಕುಮಾರ್ ಬೇನಾಮಿ ಆಸ್ತಿಯಾಗಿದ್ದು, ಈ ಜಾಗವನ್ನು ಈಗ ಸೋಲಾರ್ ಕಂಪೆನಿಗೆ ವಿದ್ಯುತ್ ಉತ್ಪಾದಿಸಲು ಲೀಸ್ ಗೆ ನೀಡಲಾಗಿದೆ.

ಪರಿಷತ್ ಸದಸ್ಯ ಗೋವಿಂದರಾಜ್ ನಿವಾಸದಲ್ಲಿ ಪತ್ತೆಯಾದ ಡೈರಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಡಿಕೆಎಸ್ ಹೆಸರು ಡಿಕೆ ಶಿವಕುಮಾರ್ ಅವರದ್ದು. ಹವಲಾ ಏಜೆಂಟ್‍ಗಳ ಮೂಲಕ ಡಿಕೆ ಶಿವಕುಮಾರ್ ಹಣವನ್ನು ಸಾಗಿಸಿದ್ದಾರೆ.

ಡಿಕೆ ಶಿವಕುಮಾರ್ ಅವರು ತನ್ನ ವೈಯಕ್ತಿಕ ವ್ಯವಹಾರದ ಬಗ್ಗೆ ಏನಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಬೆಂಗಳೂರು ಮತ್ತು ಹುಬ್ಬಳ್ಳಿಯ ಆದಾಯ ತೆರಿಗೆ ಕಚೇರಿಗೆ ಈ ಹಿಂದೆ ವಿವಿಧ ಗೆಟಪ್ ನಲ್ಲಿ ಭೇಟಿ ನೀಡಿದ್ದಾರೆ. ಇವರು ಭೇಟಿ ನೀಡಿರುವ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿದರುವ ಅಧಿಕಾರಿಗಳು ತಮಗೆ ಬೇಕಾದ ಹುದ್ದೆಯನ್ನು ಪಡೆಯಲು ಡಿಕೆ ಶಿವಕುಮಾರ್ ಅವರಿಗೆ ಹಣವನ್ನು ಸಂದಾಯ ಮಾಡುತ್ತಿದ್ದರು. ಈ ಸಂದಾಯದ ಹಿನ್ನೆಲೆಯಲ್ಲಿ ಅವರಿಗೆ ಬೇಕಾದ ಜಾಗದಲ್ಲಿ ಹುದ್ದೆ ಸಿಗುತಿತ್ತು.

ಡಿಕೆ ಶಿವಕುಮಾರ್ 60ಕ್ಕೂ ಹೆಚ್ಚು ಬಾರಿ ದುಬೈ ಮತ್ತು ಯುರೋಪ್‍ಗೆ ಪ್ರಯಾಣ ಬೆಳೆಸಿದ್ದಾರೆ. ಕಪ್ಪು ಹಣವನ್ನು ಬಿಳಿಯಾಗಿಸಲು ಶಿವಕುಮಾರ್ ಪ್ರಯಾಣ ಬೆಳೆಸಿದ್ದಾರೆ. ಅಷ್ಟೇ ಅಲ್ಲದೇ ವಿದೇಶದಲ್ಲಿ ಹಲವು ಕಡೆ ಹಣವನ್ನು ಹೂಡಿಕೆ ಮಾಡಿದ್ದಾರೆ. ಹೀಗಾಗಿ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಜೊತೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಅಡಿ ಪ್ರಕರಣದ ದಾಖಲಿಸಿ ನೀವು ತನಿಖೆ ನಡೆಸಬೇಕು.

ಇದನ್ನೂ ಓದಿ: ಸಿಎಂ ವಿರುದ್ಧ ಕಿಡಿಕಾರಿದ ಡಿಕೆ ಶಿವಕುಮಾರ್ ತಾಯಿ

Leave a Reply

Your email address will not be published. Required fields are marked *