ಚಿಕ್ಕಮಗಳೂರು: ವರ್ಷಪೂರ್ತಿ ಹೊಲಗದ್ದೆಗಳಲ್ಲಿ ದುಡಿಯುವ ರಾಸುಗಳಿಗಾಗೇ ಕಾಫಿನಾಡಿನಲ್ಲಿ ಜೋಡಿ ಎತ್ತಿನಗಾಡಿ ಸ್ಪರ್ಧೆ ಏರ್ಪಡಿಸಲಾಗಿತ್ತು. ತಾಲೂಕಿನ ತೇಗೂರು ಗ್ರಾಮದ ಅರಸು ಗೆಳೆಯರ ಬಳಗ ಹಾಗೂ ಮಾರುತಿ ಯುವಕರ ಸಂಘ ನೇತೃತ್ವದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ಮೂಲೆಮೂಲೆಗಳಿಂದ 80ಕ್ಕೂ ಹೆಚ್ಚು ಜೋಡೆತ್ತುಗಳು ಪಾಲ್ಗೊಂಡಿದ್ದವು. ಮಧ್ಯರಾತ್ರಿ 12 ಗಂಟೆಯಾದ್ರು ಸಾವಿರಾರು ಜನ ಎತ್ತಿನಗಾಡಿ ಸ್ಪರ್ಧೆಯನ್ನು ನೋಡಿ ಖುಷಿಪಟ್ಟರು. ಅರಸು ಗೆಳೆಯರ ಬಳಗ 14 ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ.
ತೇಗೂರು ಗ್ರಾಮದ ಹೊರವಲಯದ ವಿಸ್ತಾರವಾದ ಪ್ರದೇಶದಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗೆ ಬೆಂಗಳೂರು, ಮೈಸೂರು, ತುಮಕೂರು, ಮಂಡ್ಯ, ಹಾಸನ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 80ಕ್ಕೂ ಹೆಚ್ಚು ಜೋಡೆತ್ತುಗಳು ಸ್ಫರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನಕ್ಕಾಗಿ ಭಾರೀ ಪೈಪೋಟಿ ನೀಡಿದವು. ಮೊದಲ ಸ್ಥಾನ 60 ಸಾವಿರ, ಎರಡನೇ ಸ್ಥಾನ 50, ಮೂರು 40 ಹಾಗೂ ನಾಲ್ಕನೇ ಸ್ಥಾನಕ್ಕೆ 30 ಸಾವಿರ ಹಣ ಹಾಗೂ ಪಾರಿತೋಷಕವನ್ನು ನಿಗದಿ ಮಾಡಲಾಗಿತ್ತು.
Advertisement
Advertisement
ಸ್ಪರ್ಧೆಗಾಗಿಯೇ ರೈತರು ಎತ್ತುಗಳನ್ನ ಮಕ್ಕಳಂತೆ ಸಾಕಿರುತ್ತಾರೆ. ಮೂರ್ನಾಲ್ಕು ಲಕ್ಷ ಬೆಲೆ ಬಾಳುವ ಎತ್ತುಗಳು ರೈತರಿಗೆ ಕುದುರೆಗಳಿದ್ದಂತೆ. ಹೊಲದಲ್ಲೇ ಭೂಮಿ ಉಳುಮೆಗೂ ಸೈ, ಬಯಲಲ್ಲಿ ಓಡೋದಕ್ಕೂ ಸೈ ಎಂಬಂತೆ ಬೆಳೆಸಿರುತ್ತಾರೆ. ಹೊಲಗದ್ದೆಗಳ ಕೆಲಸ ಕಾರ್ಯ ಮುಗಿದ ಮೇಲೆ ರೈತರು ರಾಸುಗಳನ್ನು ಇಂತಹ ಓಟಗಳಲ್ಲಿ ಭಾಗವಹಿಸಿ ಖುಷಿಪಡ್ತಾರೆ. ಸ್ಪರ್ಧೆಯ 15 ದಿನ ಮೊದಲೇ ಎತ್ತುಗಳಿಗೆ ವಿಶೇಷ ತರಬೇತಿ ಕೊಡುತ್ತಾರೆ. ಜೊತೆಗೆ ಇಂಡಿ, ಬೂಸಾ, ಹಸಿ ಹುಲ್ಲು, ರಾಗಿ ಹುಲ್ಲು, ಮೆಕ್ಕೆಜೋಳ, ಹಾಲು-ಮೊಸರು-ಬೆಣ್ಣೆ-ತುಪ್ಪ, ಮೆಂತೆ ಮುದ್ದೆ ಕೊಟ್ಟು ಚೆನ್ನಾಗಿ ತಯಾರಿ ಮಾಡಿರುತ್ತಾರೆ. ರೈತರಿಗೆ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವುದಕ್ಕಿಂತ ಭಾಗವಹಿಸುವುದೇ ಸಂತಸ.
Advertisement
Advertisement
ಸ್ಪರ್ಧೆಯ ಮೈದಾನದ ಸುತ್ತಲೂ ಬಂದೋಬಸ್ತ್ ಮಾಡಲಾಗಿತ್ತು. ಏಕೆಂದರೆ ಕುದುರೆಯಂತೆ ಓಡುವ ರಾಸುಗಳು ಹೇಗೆ ಬೇಕೋ ಹಾಗೇ ನುಗ್ಗುವುದರಿಂದ ಪ್ರೇಕ್ಷಕರ ಹಿತದೃಷ್ಠಿಯಿಂದ ಮೈದಾನದ ಸುತ್ತಲೂ ಮರದಿಂದ ಬೇಲಿ ನಿರ್ಮಿಸಲಾಗಿತ್ತು. ಒಮ್ಮೆಲೆ ಎರಡು ಗಾಡಿಗಳು ಓಡಾಡುವುದರಿಂದ ಎ ಹಾಗೂ ಬಿ ಎಂಬ ಎರಡು ರ‍್ಯಾಕ್‌ನಲ್ಲಿ ಎರಡು ಗಾಡಿಗಳನ್ನು ಬಿಡಲಾಗ್ತಿತ್ತು. ನೋಡುಗರಿಗೆ ಅನುಕೂಲವಾಗಲೆಂದು ಎ ಹಾಗೂ ಬಿ ಎರಡೂ ಬದಿಯಲ್ಲೂ ಎರಡು ಎಲ್.ಇ.ಡಿ ವಾಲ್ ಅಳವಡಿಸಲಾಗಿತ್ತು. ಎತ್ತುಗಳು ಓಡುವ ವೇಗ ಕಂಡ ಜನ ಇವು ಎತ್ತೋ ಅಥವಾ ರೇಸ್ ಓಡುವ ಕುದುರೆಗಳೋ ಎಂದು ಶಿಲ್ಲೆ ಹೊಡೆದು ಕೇಕೆ ಹಾಕಿ ಕೂಗಾಡಿದರು.
ಮಲೆನಾಡಲ್ಲಿ ಅಪರೂಪವೆನಿಸಿದ್ದ ಈ ಜೋಡೆತ್ತಿನಗಾಡಿ ಸ್ಪರ್ಧೆಯನ್ನು ಐದು ಸಾವಿರಕ್ಕೂ ಅಧಿಕ ಮಂದಿ ಕಣ್ತುಂಬಿಕೊಂಡರು. ಸ್ಪರ್ಧೆಯಲ್ಲಿ ಎತ್ತುಗಳನ್ನು ಓಡಿಸಿದ ರೈತರು ಖುಷಿ ಪಟ್ಟರು. ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸ್ತಿರೋ ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರಿನ ತೇಗೂರಿನಲ್ಲಿ ನಡೆದ ಈ ಸ್ಪರ್ಧೆ ಜನಮನ ಸೆಳೆಯಿತು. ಸ್ಥಳೀಯರು ಹಾಗೂ ದೂರದೂರಿನಿಂದ ಬಂದಿದ್ದ ಸ್ಪರ್ಧಾಳುಗಳು ಇಂತಹಾ ಗ್ರಾಮೀಣ ಕ್ರೀಡೆಗಳು ಜೀವಂತವಾಗಿರಲೆಂದು ಬಯಸಿದರು.