ಮಂಡ್ಯ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದ ರೈತ ಕುಟುಂಬಕ್ಕೆ ಎರಡು ವರ್ಷವಾದರೂ ಪರಿಹಾರ ಸಿಕ್ಕಿಲ್ಲ.
ಜಿಲ್ಲೆಯ ಪಾಂಡವಪುರ ತಾಲೂಕಿನ ಸಣಬದಕೊಪ್ಪಲು ಗ್ರಾಮದ ರೈತ ಲೋಕೇಶ್, 2015 ಅಕ್ಟೋಬರ್ 09 ರಂದು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದರು. ಇದೇ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಮನೆಗೆ ಭೇಟಿ ನೀಡಲು ರಾಹುಲ್ ಗಾಂಧಿ ಮಂಡ್ಯ ಜಿಲ್ಲೆಗೆ ಆಗಮಿಸಿದ್ರು.
Advertisement
ರಾಹುಲ್ ಗಾಂಧಿಯೊಂದಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಇಂಧನ ಸಚಿವ ಡಿಕೆ ಶಿವಕುಮಾರ್, ಮಾಜಿ ಸಂಸದೆ ರಮ್ಯಾ ಸೇರಿದಂತೆ ಕಾಂಗ್ರೆಸ್‍ನ ಘಟಾನುಘಟಿ ನಾಯಕರು ಜಿಲ್ಲೆಗೆ ಆಗಮಿಸಿದ್ರು. ಆತ್ಮಹತ್ಯಗೆ ಶರಣಾಗಿದ್ದ ವಿಷ್ಯ ಕೇಳಿದ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ದಂಡಿನೊಂದಿಗೆ ನೇರವಾಗಿ ಆತ್ಮಹತ್ಯೆಗೆ ಶರಣಾದ ರೈತ ಲೋಕೇಶ್ ಮನೆಗೆ ಭೇಟಿ ನೀಡಿದ್ರು.
Advertisement
ಲೋಕೇಶ್ ಮೃತದೇಹದ ಮುಂದೆ ಕುಳಿತು ಕಣ್ಣೀರು ಹಾಕುತ್ತಿದ್ದ ಕುಟುಂಬಕ್ಕೆ ಸಾಂತ್ವನ ಹೇಳಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಒಂದು ಲಕ್ಷ ರೂ. ಚೆಕ್ ನೀಡಿ, ಸರ್ಕಾರದಿಂದ ಪರಿಹಾರ ನೀಡುವ ಭರವಸೆ ಕೂಡ ನೀಡಿದ್ರು. ಆದ್ರೆ ರಾಹುಲ್ ಗಾಂಧಿ ರೈತನ ಮನೆಗೆ ಬಂದು ಹೋಗಿ ಸುಮಾರು ಎರಡು ವರ್ಷ ಮುಗಿಯುತ್ತಾ ಬಂದರೂ, ರೈತ ಕುಟುಂಬಕ್ಕೆ ಸರ್ಕಾರದ ಪರಿಹಾರದ ಹಣ ಮಾತ್ರ ದೊರಕಿಲ್ಲ.
Advertisement
ಆತ್ಮಹತ್ಯೆಗೆ ಶರಣಾದ ರೈತ ಲೋಕೇಶ್ ಅವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗನನ್ನು ಮಂಡ್ಯ ಸಂಸದ ಪುಟ್ಟರಾಜು ಓದಿಸುತ್ತಿದ್ದಾರೆ. ಲೋಕೇಶ್ ಪತ್ನಿ ಶೋಭಾ ಕೂಲಿ ಮಾಡಿಕೊಂಡು ಮನೆಯ ಜವಾಬ್ದಾರಿ ಹೊತ್ತಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸರ್ಕಾರದ ಪರಿಹಾರಕ್ಕಾಗಿ ಲೋಕೇಶ್ ಕುಟುಂಬ ಅಧಿಕಾರಿಗಳ ಬಳಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
Advertisement
ಸೆಪ್ಟೆಂಬರ್ 8 ರಂದು ಮಂಡ್ಯದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದ ಪುಟ್ಟರಾಜು ವೇದಿಕೆ ಮೇಲೆಯೇ ರೈತ ಕುಟುಂಬಕ್ಕೆ ಪರಿಹಾರ ಸಿಗದಿರುವ ಬಗ್ಗೆ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ರು. ಇದರ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಆದ್ರೆ ಪರಿಹಾರ ಸಿಗೋದು ಯಾವಾಗ? ಕಷ್ಟಕಾಲದಲ್ಲಿಯೂ ಪರಿಹಾರ ಸಿಗದಿದ್ರೆ ಹೇಗೆ ಅನ್ನೋದು ರೈತ ಕುಟುಂಬದ ಪ್ರಶ್ನೆಯಾಗಿದೆ.