– ಪರಿಹಾರ ಘೋಷಿಸಿದ ಪಿಎಂಎನ್‌ಆರ್‌ಎಫ್, ರೈಲ್ವೇ ಇಲಾಖೆ ಹಾಗೂ ತಮಿಳುನಾಡು ಸರ್ಕಾರ
ನವದೆಹಲಿ: ಒಡಿಶಾದಲ್ಲಿ (Odisha) ನಡೆದ ಭೀಕರ ರೈಲು ಅಪಘಾತದಿಂದಾಗಿ (Train Accident) 261 ಮಂದಿ ಸಾವನ್ನಪ್ಪಿದ್ದು, 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಪಿಎಂಎನ್‌ಆರ್‌ಎಫ್, ತಮಿಳುನಾಡು ಸರ್ಕಾರ ಹಾಗೂ ರೈಲ್ವೇ ಇಲಾಖೆ ಘಟನೆಗೆ ಸಂತಾಪ ಸೂಚಿಸಿ ಮೃತರಿಗೆ ಹಾಗೂ ಗಾಯಾಳುಗಳಿಗೆ ಪರಿಹಾರ (Compensation) ಘೋಷಿಸಿದೆ.
ಶುಕ್ರವಾರ ಒಡಿಶಾದಲ್ಲಿ ನಡೆದ ರೈಲು ದುರಂತಕ್ಕೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಪರಿಹಾರ ಘೋಷಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಿದೆ. ಇದನ್ನೂ ಓದಿ: ರೈಲು ದುರಂತ – ಕನ್ನಡಿಗರ ಸುರಕ್ಷತೆ ಮೇಲ್ವಿಚಾರಣೆಗೆ ಸಚಿವ ಸಂತೋಷ್ ಲಾಡ್ ನಿಯೋಜನೆ
ಅದೇ ರೀತಿ ರೈಲ್ವೇ ಸಚಿವಾಲಯವು (Ministry of Railways) ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ., ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಅಲ್ಪ ಪ್ರಮಾಣದಲ್ಲಿ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಘೋಷಿಸಿದೆ. ಈ ಕುರಿತು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav), ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಮೃತರ ಕುಟುಂಬಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. ಶನಿವಾರ ಮುಂಜಾನೆ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಅವರು, ಅಪಘಾತದ ಬಗ್ಗೆ ವಿವರವಾದ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಇದನ್ನೂ ಓದಿ: Odisha Train Accident; 48 ರೈಲು ಸಂಚಾರ ರದ್ದು, 39 ರೈಲುಗಳ ಮಾರ್ಗ ಬದಲಾವಣೆ
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ರೈಲು ಅಪಘಾತದಲ್ಲಿ ಗಾಯಗೊಂಡ ಜನರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು, ಒಡಿಶಾದಲ್ಲಿ ಇಂದು (ಶನಿವಾರ) ಶೋಕಾಚರಣೆಯನ್ನು ಘೋಷಿಸಿದ್ದಾರೆ. ಅಂತೆಯೇ ತಮಿಳುನಾಡು (Tamil Nadu) ಸರ್ಕಾರ ಅಪಘಾತಕ್ಕೀಡಾದ ತಮಿಳುನಾಡಿನ ಜನರಿಗೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K.Stalin) ಅವರು ದುರ್ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿ, ತಮಿಳುನಾಡು ಮೂಲದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತ; ಸಂಚಾರ ರದ್ದಾಗಿ ಬೆಂಗ್ಳೂರಲ್ಲೇ ನಿಂತ ಬೆಂಗಳೂರು-ಗುವಾಹಟಿ ರೈಲು
ದುರಂತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi), ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೇರಿದಂತೆ ಅನೇಕ ಗಣ್ಯರು ವಿಷಾದ ವ್ಯಕ್ತಪಡಿಸಿದ್ದಾರೆ. ಅನೇಕ ಗಣ್ಯರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ದೊಡ್ಡಮಟ್ಟದ ಸದ್ದು ಕೇಳಿಬಂತು; ದುರಂತದ ಘನಘೋರ ದೃಶ್ಯ ಬಿಚ್ಚಿಟ್ಟ ಕನ್ನಡಿಗ