ಕೆಜಿಎಫ್ (KGF) ಸಿನಿಮಾ ಮೂಲಕ ಭಾರತೀಯ ಸಿನಿಮಾ ರಂಗವನ್ನೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದವರು ನಿರ್ದೇಶಕ ಪ್ರಶಾಂತ್ ನೀಲ್ (Prashant Neil). ಈ ಸಿನಿಮಾದ ಮೂಲಕ ಪ್ರಶಾಂತ್ ಕೇವಲ ಕನ್ನಡದ ನಿರ್ದೇಶಕರನ್ನಾಗಿ ಗುರುತಿಸುತ್ತಿಲ್ಲ, ಭಾರತೀಯ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ. ಇವರ ಚಿತ್ರಗಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬರುತ್ತಿವೆ. ಕಬ್ಜ (Kabzaa) ಸಿನಿಮಾದ ನಂತರ ಅಂಥದ್ದೊಂದು ಸ್ಥಾನ ನಿರ್ದೇಶಕ ಆರ್.ಚಂದ್ರು ಅವರ ಪಾಲಾಗಿದೆ. ಪ್ರಶಾಂತ್ ನೀಲ್ ಜೊತೆ ಆರ್.ಚಂದ್ರು (R. Chandru) ಅವರನ್ನೂ ಹೋಲಿಕೆ ಮಾಡಲಾಗುತ್ತಿದೆ.
ಹಿಂದಿ, ತಮಿಳು, ತೆಲುಗು ಚಿತ್ರರಂಗದಲ್ಲಿ ‘ಕಬ್ಜ’ ಸಿನಿಮಾದ ಟ್ರೈಲರ್, ಟೀಸರ್ ಮತ್ತು ಹಾಡುಗಳು ಹವಾ ಕ್ರಿಯೇಟ್ ಮಾಡುತ್ತಿದ್ದಂತೆಯೇ ಕೆಜಿಎಫ್ ಮತ್ತು ಕಬ್ಜ ಸಿನಿಮಾವನ್ನು ಹೋಲಿಕೆ ಮಾಡಿ ಮಾತನಾಡಲಾಗುತ್ತಿದೆ. ಚಿತ್ರದ ಗುಣಮಟ್ಟ, ಮೇಕಿಂಗ್, ಬಜೆಟ್, ತಾರಾಗಣ, ಸೆಟ್ ಹೀಗೆ ನಾನಾ ಕಾರಣಗಳನ್ನಿಟ್ಟುಕೊಂಡು ಚರ್ಚೆ ಮಾಡಲಾಗುತ್ತಿದೆ. ಈ ಕಾರಣದಿಂದಾಗಿಯೇ ನಿರ್ದೇಶಕ ಆರ್.ಚಂದ್ರು ಇದೀಗ ಭಾರತೀಯ ಸಿನಿಮಾ ರಂಗದ ಮತ್ತೊಬ್ಬ ಪ್ರಮುಖ ನಿರ್ದೇಶಕರ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು
ಕೆಜಿಎಫ್ ಸಿನಿಮಾ ಕೂಡ ಕನ್ನಡದಲ್ಲಿ ನಿರ್ಮಾಣವಾಗಿ ಆನಂತರ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿತ್ತು. ಹಿಂದಿಯಲ್ಲಿ ಭಾರೀ ಬೇಡಿಕೆ ಕ್ರಿಯೇಟ್ ಆಗಿತ್ತು. ಕಬ್ಜ ಸಿನಿಮಾ ಕೂಡ ಮೂಲ ಕನ್ನಡದಲ್ಲಿ ನಿರ್ಮಾಣವಾಗಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿದೆ. ಬಾಲಿವುಡ್ ನಲ್ಲಿ ಕಬ್ಜ ಚಿತ್ರಕ್ಕೆ ಸಾಕಷ್ಟು ಬೇಡಿಕೆ ಬಂದಿದೆ. ಪ್ರತಿಷ್ಠಿತ ವಿತರಣಾ ಸಂಸ್ಥೆಯು ಈ ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ. ಅಲ್ಲದೇ, ಬೇರೆ ಬೇರೆ ಭಾಷೆಗಳು ಸೇರಿದಂತೆ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಹೀಗಾಗಿ ಹೋಲಿಕೆ ಹೆಚ್ಚಾಗಿದೆ.
ಪ್ರಶಾಂತ್ ನೀಲ್ ಮೊದಲ ಚಿತ್ರದಲ್ಲೇ ಗೆಲುವು ಕಂಡವರು. ಆರ್.ಚಂದ್ರು ನಿರ್ದೇಶನದ ಮೊದಲ ಚಿತ್ರ ‘ತಾಜ್ ಮಹಲ್’ ಕೂಡ ಬಾಕ್ಸ್ ಆಫೀಸ್ ಭರ್ತಿ ಮಾಡಿತ್ತು. ನಂತರದ ಪ್ರೇಮ್ ಕಹಾನಿ, ಮೈಲಾರಿ, ಚಾರ್ ಮಿನಾರ್, ಐ ಲವ್ ಯೂ ಸಾಲು ಸಾಲು ಚಿತ್ರಗಳು ಕೂಡ ದಾಖಲೆ ರೀತಿಯಲ್ಲಿ ಪ್ರದರ್ಶನ ಕಂಡವು. ಹೀಗಾಗಿ ಕನ್ನಡದ ಇಬ್ಬರು ನಿರ್ದೇಶಕರ ಬಗ್ಗೆ ಇದೀಗ ಇಡೀ ಭಾರತೀಯ ಚಿತ್ರರಂಗವೇ ಮಾತನಾಡುತ್ತಿದೆ.