ಮೈಸೂರು: ಉಡುಪಿ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ 9 ಜನ ಸಾವನ್ನಪ್ಪಿದ ಪ್ರಕರಣದ ವಿಚಾರವಾಗಿ ಮೈಸೂರಿನ ವಿಠಲ್ ಕಂಪನಿಗೆ ಇಂದು ರಜೆ ಘೋಷಣೆ ಮಾಡಲಾಗಿದ್ದು, ಸಿಬ್ಬಂದಿಯ ಸಾವಿನಿಂದ ಕಂಪನಿ ಆವರಣದಲ್ಲಿ ನೀರವ ಮೌನ ಆವರಿಸಿದೆ. ಇದನ್ನೂ ಓದಿ: ಉಡುಪಿ ಅಪಘಾತ: ಸಾವಿನ ಸಂಖ್ಯೆ 9ಕ್ಕೆ ಏರಿಕೆ, 15 ಮಂದಿಗೆ ಗಾಯ, ಐವರು ಗಂಭೀರ
ಮೈಸೂರಿನ ವಿಠಲ್ ರೆಕಾರ್ಡ್ ಕಂಪನಿಯಿಂದ ಫೆಬ್ರವರಿ 14ರ ಮಧ್ಯರಾತ್ರಿ 32 ಉದ್ಯೋಗಿಗಳಿದ್ದ ಬಸ್ ಪ್ರವಾಸಕ್ಕೆ ತೆರಳಿತ್ತು. ಶನಿವಾರ ಕಾರ್ಕಳದ ಮಾಳಾ ಬಳಿ ಬಸ್ ಅಪಘಾತಕ್ಕಿಡಾಗಿತ್ತು. ಪ್ರವಾಸಕ್ಕೆ ತೆರಳಿದ್ದವರಲ್ಲಿ 9 ಮಂದಿ ಸಾವನ್ನಪ್ಪಿದ್ದರು.
ಮೈಸೂರಿನ ಹೊರವಲಯದ ಮೇಟಗಳ್ಳಿಯ ಇಂಡಸ್ಟ್ರಿಯಲ್ ಏರಿಯದಲ್ಲಿರುವ ಈ ಕಂಪನಿಯಲ್ಲಿ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಾರೆ ಎಂದು ಮಾಹಿತಿ ತಿಳಿದುಬಂದಿದೆ. ಎರಡು ದಿನಗಳ ಪ್ರವಾಸಕ್ಕೆ ತೆರಳಿದ್ದ ಕಂಪನಿಯ ಉದ್ಯೋಗಿಗಳಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಜಪಾನ್ ಮೂಲದ ಈ ಕಂಪನಿ ಮೈಸೂರಿನಲ್ಲಿ ಬ್ರಾಂಚ್ ಕಚೇರಿ ತೆರೆದಿದ್ದು, ಡಾಟಾ ಎಂಟ್ರಿ ಮಾಡೋದು ಈ ಕಂಪನಿಯ ಮುಖ್ಯ ಉದ್ಯಮವಾಗಿದೆ. ಈ ಘಟನೆಯಿಂದಾಗಿ ಕಂಪನಿಗೆ ರಜೆ ಘೋಷಣೆ ಮಾಡಿದ್ದು, ಕಂಪನಿ ಬಳಿ ಯಾರೊಬ್ಬರೂ ಇಲ್ಲದಂತಾಗಿದೆ.
ಏನಿದು ಪ್ರಕರಣ?
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಎಸ್.ಕೆ ಬಾರ್ಡರ್ ಬಳಿ ಭೀಕರ ಅಪಘಾತ ಸಂಭವಿಸಿತ್ತು. ಮೈಸೂರಿನಿಂದ ಪ್ರವಾಸ ಬಂದಿದ್ದ ಒಂಬತ್ತು ಮಂದಿ ಅಪಘಾತದಲ್ಲಿ ಅಸುನೀಗಿದ್ದಾರೆ. 25 ಮಂದಿ ಗಾಯಗೊಂಡಿದ್ದಾರೆ.
ಉಡುಪಿ-ಚಿಕ್ಕಮಗಳೂರು ಘಾಟಿ ರಸ್ತೆಯ ಎಸ್.ಕೆ.ಬಾರ್ಡರ್ ಸಮೀಪದ ಅಬ್ಬಾಸ್ ಕಟ್ಟಿಂಗ್ ಬಳಿ ಬಸ್ ಬಂಡೆಗೆ ಡಿಕ್ಕಿ ಹೊಡೆದಿದೆ. ಘಾಟಿಯ ರಸ್ತೆ ಅತಿ ಕಿರಿದಾಗಿದ್ದರಿಂದ ಮುಂದೆ ವಾಹನ ಬಂದಾಗ ಬಲಕ್ಕೆ ತಿರುವು ತೆಗೆದುಕೊಳ್ಳುವಾಗ ಆ್ಯಕ್ಸೆಲ್ ಕಟ್ ಆಗಿದ್ದರಿಂದ ಅಪಘಾತ ಸಂಭವಿಸಿದೆ. ಬಸ್ ಬಲಕ್ಕೆ ತಿರುಗಿದಾಗ ಸುಮಾರು 50 ರಿಂದ 60 ಮೀಟರ್‌ವರೆಗೆ ಬಂಡೆಗೆ ಉಜ್ಜಿಕೊಂಡು ಮುಂದಕ್ಕೆ ಸಾಗಿದ್ದರಿಂದ ಬಲಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರೇ ಸಾವನ್ನಪ್ಪಿದ್ದಾರೆ.