ನವದೆಹಲಿ: ಕಾರು ತಯಾರಿಕಾ ಕಂಪೆನಿಗಳು ಹೊಸ ವಾಹನಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡಿದ್ದು, ಗ್ರಾಹಕರು 50 ಸಾವಿರ ರೂಪಾಯಿಗಳಿಂದ 14 ಲಕ್ಷ ರೂಪಾಯಿಗಳವರೆಗೆ ಭಾರೀ ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಹೌದು, ಹಬ್ಬದ ಸಮಯದಲ್ಲಿ ಗ್ರಾಹಕರಿಗಾಗಿ ಕಂಪೆನಿಗಳು ಭಾರೀ ರಿಯಾಯಿತಿಯನ್ನು ಘೋಷಿಸಿವೆ. ಆದರೆ ಮಾಹಿತಿಗಳ ಪ್ರಕಾರ ರಿಯಾಯಿತಿ ಹಬ್ಬದ ಉದ್ದೇಶವಲ್ಲ. ಬದಲಾಗಿ ಹೆಚ್ಚುತ್ತಿರುವ ಇಂಧನ ಬೆಲೆ, ವಾಹನ ವಿಮಾ ಪಾಲಿಸಿಗಳ ನೂತನ ನೀತಿ ಹಾಗೂ ಪ್ರಕೃತಿ ವಿಕೋಪಗಳಿಂದಾಗಿ ಕಾರು ಕಂಪೆನಿಗಳ ಮೇಲೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಕಂಪೆನಿಗಳು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ರಿಯಾಯಿತಿ ದರವನ್ನು ಘೋಷಿಸಿವೆ.
Advertisement
Advertisement
ಯಾವೆಲ್ಲಾ ಕಂಪೆನಿಗಳು ರಿಯಾಯಿತಿ ನೀಡಿವೆ?
ಹ್ಯಾಚ್‍ಬ್ಯಾಕ್, ಸೇಡನ್ ಹಾಗೂ ಎಸ್‍ಯುವಿ ತಯಾರಿಕಾ ಸಂಸ್ಥೆಗಳಾದ ಮಾರುತಿ ಸುಜುಕಿ, ಹುಂಡೈ, ಮಹೀಂದ್ರ, ಫೋರ್ಡ್ ಮತ್ತು ಟಾಟಾ ಮೋಟಾರ್ಸ್ ಹಾಗೂ ಐಷಾರಾಮಿ ಕಾರುಗಳಾದ ಬಿಎಂಡಬ್ಲ್ಯೂ, ಆಡಿ, ಮೆರ್ಸಿಡೀಸ್ ಬೆಂಜ್ ಸಹ ರಿಯಾಯಿತಿ ಘೋಷಿಸಿವೆ.
Advertisement
ಮಾರುತಿ ಸುಜುಕಿ ಕಂಪೆನಿಯು ತನ್ನ ಮಾರುತಿ ಆಲ್ಟೋ ಕಾರಿನ ಮೇಲೆ 50 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದ್ದರೆ, ಮಹೀಂದ್ರ ಕಂಪೆನಿಯು ತನ್ನ ಸ್ಕಾರ್ಪಿಯೋ ಎಸ್‍ಯುವಿ ಮೇಲೆ 70 ಸಾವಿರ ರೂಪಾಯಿ ಕಡಿತಗೊಳಿಸಿದೆ. ಇದಲ್ಲದೇ ಐಷಾರಾಮಿ ಕಾರು ತಯಾರಿಕಾ ಸಂಸ್ಥೆ ಬಿಎಂಡಬ್ಲ್ಯೂ ತನ್ನ 7-ಸೀರಿಸ್ ಮೇಲೆ 14 ಲಕ್ಷ ರೂಪಾಯಿ ರಿಯಾಯಿತಿ ನೀಡಿದೆ. ಇದಲ್ಲದೇ ಇತರೆ ಸಂಸ್ಥೆಗಳು ತಮ್ಮಲ್ಲಿ ತಯಾರಿಕೆಯಾಗುವ ಕಾರುಗಳ ಮೇಲೆ 50 ಸಾವಿರ ರೂಪಾಯಿಗಳಿಂದ 14 ಲಕ್ಷ ರೂಪಾಯಿಗಳ ವರೆಗೆ ವಿಶೇಷ ರಿಯಾಯಿತಿ ನೀಡಲಿವೆ.
Advertisement
ಮಾರುತಿ ಸುಜುಕಿ ಕಂಪೆನಿಯ ಕಾರುಗಳಾದ ಬಲೆನೋ ಮೇಲೆ 25 ಸಾವಿರ ರೂಪಾಯಿ, ಆಲ್ಟೋ ಕೆ-10ಮಾದರಿಗೆ 50 ಸಾವಿರ ರೂಪಾಯಿ ಹಾಗೂ ವ್ಯಾಗನ್ ಆರ್ ಕಾರಿಗೆ 75 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದೆ.
ಹುಂಡೈ ಕಂಪೆನಿಯ ಕಾರುಗಳಾದ ಎಲೈಟ್ ಐ-20 ಕಾರಿಗೆ 50 ಸಾವಿರ ರೂಪಾಯಿ, ಗ್ರಾಂಡ್ ಐ-10 ಕಾರಿಗೆ 75 ಸಾವಿರ ರೂಪಾಯಿ ರಿಯಾಯಿತಿ ನೀಡಿದೆ. ಇದಲ್ಲದೇ ಟಾಟಾದ ನೆಕ್ಸಾನ್ ಕಾರಿಗೆ 57 ಸಾವಿರ ರೂಪಾಯಿ, ಹೊಂಡಾದ ಹೊಂಡಾ ಸಿಟಿ ಕಾರಿನ ಮೇಲೆ 62 ಸಾವಿರ ರೂಪಾಯಿ, ರೆನಾಲ್ಟ್ ಡಸ್ಟರ್ ಮೇಲೆ 1 ಲಕ್ಷ ರೂಪಾಯಿ, ಟೊಯೋಟಾದ ಯಾರೀಸ್ ಮೇಲೆ 50 ಸಾವಿರ ರೂಪಾಯಿ ರಿಯಾಯಿತಿ ಘೋಷಿಸಿದೆ.
ಐಶಾರಾಮಿ ಕಾರುಗಳಾದ ಮರ್ಸಿಡೀಸ್ ಬೆಂಜ್ ಸಿಎಲ್‍ಎ ಮಾದರಿಗೆ 5.5 ಲಕ್ಷ ರೂಪಾಯಿ, ಜಿಎಲ್‍ಸಿ ಪೆಟ್ರೋಲ್ ಮಾದರಿಗೆ 6 ಲಕ್ಷ ರಿಯಾಯಿತಿ ನೀಡಿದ್ದರೆ, ಆಡಿ ಕಂಪೆನಿಯು ತನ್ನ ಆಡಿ ಎ6 ಮಾದರಿ ಮೇಲೆ 12.5 ಲಕ್ಷ ರೂಪಾಯಿ ರಿಯಾಯಿತಿ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹೀಂದ್ರ ಕಂಪೆನಿಯ ಅಧ್ಯಕ್ಷ ರಾಜನ್ ವಾಡೇರಾ, ಹೊಸ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಇದೊಂದು ಬಂಪರ್ ಕೊಡುಗೆಯಾಗಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಆಗುತ್ತಿರುವ ನಷ್ಟ ಹಾಗೂ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ರಿಯಾಯಿತಿಯನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.
ಹುಂಡೈ ಮತ್ತು ಮಾರುತಿ ಅಧಿಕಾರಿಗಳ ಪ್ರಕಾರ, ಜಾಗತೀಕ ಮಟ್ಟದಲ್ಲಿ ರೂಪಾಯಿ ಮೌಲ್ಯ ಕುಸಿತ, ಏರುತ್ತಿರುವ ಇಂಧನ ದರ ಮತ್ತು ವಿಮೆ ದರಗಳ ನೀತಿಯಿಂದ ಗ್ರಾಹಕರು ವಾಹನಗಳ ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ದರ ಕಡಿತಗೊಳಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸಲು ರಿಯಾಯಿತಿಯನ್ನು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv