Connect with us

ಬಜರಂಗದಳ ಶಿವಮೊಗ್ಗ ಜಿಲ್ಲಾ ಸಂಚಾಲಕನ ಮೇಲೆ ಕೇಸ್

ಬಜರಂಗದಳ ಶಿವಮೊಗ್ಗ ಜಿಲ್ಲಾ ಸಂಚಾಲಕನ ಮೇಲೆ ಕೇಸ್

ಶಿವಮೊಗ್ಗ: ನಗರದಲ್ಲಿ ನಡೆದ ಗೋ ಸತ್ಯಾಗ್ರಹದಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ದೀನದಯಾಳು ಕೋಮು ಪ್ರಚೋದಕ ಭಾಷಣ ಮಾಡಿದ್ದಾರೆ ಎಂದು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ನಗರದ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಎಫ್‍ಐಆರ್ ಸಲ್ಲಿಸಲಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಸಾಧುಸಂತರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗೋ ಸತ್ಯಾಗ್ರಹದದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಭಾನುಪ್ರಕಾಶ್ ಸೇರಿದಂತೆ ಹಲವಾರು ಮುಖಂಡರು ಮಾತನಾಡಿದ್ದರು. ಹಿರಿಯೂರು ಮಠದ ಲಕ್ಷ್ಮಣಾರ್ಯ ಸ್ವಾಮೀಜಿ, ಭದ್ರಗಿಗಿರಿಯ ಮುರುಗೇಶ್ ಸ್ವಾಮೀಜಿ, ಗೊಂದಿ ಮಠದ ನಾಮಾನಂದ ಸ್ವಾಮೀಜಿ, ಅರಕೆರೆಯ ಕರಿಸಿದ್ದೇಶ್ವರ ಸ್ವಾಮೀಜಿಗಳು ಸಾನಿಧ್ಯದಲ್ಲಿ ಗೋ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಜರಂಗದಳ ಜಿಲ್ಲಾ ಸಂಚಾಲಕ ದೀನದಯಾಳು ಅವರು, ನಗರದಲ್ಲಿ 60 ಕಸಾಯಿ ಖಾನೆಗಳಿವೆ. ಇವುಗಳನ್ನು ತೆರವುಗೊಳಿಸುವಲ್ಲಿ ಜಿಲ್ಲಾಧಿಕಾರಿ, ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಯಾವುದೇ ಕ್ರಮಕೈಗೊಂಡಿಲ್ಲ. ಈ ಬಗ್ಗೆ ನಾವು ನೀಡಿದ ಮನವಿಗೆ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎಂದು ಒಂದು ಕೋಮಿನ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಿ, ತಮ್ಮ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ ಎಂದು ಎಫ್‍ಐಆರ್ ನಲ್ಲಿ ಹೇಳಲಾಗಿದೆ.

ದೀನ ದಯಾಳು ಅವರು, ಶಿವಮೊಗ್ಗದಂತ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಸೌಹಾರ್ದತೆ ಹದಗೆಡಿಸಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಇದೇ ರೀತಿ ಸಭೆ ಸಮಾರಂಭಗಳಲ್ಲಿ ಕೋಮು ಪ್ರಚೋದಕ ಭಾಷಣ ಮಾಡಿ, ಶಾಂತಿ- ಸುವ್ಯವಸ್ಥೆಗೆ ಧಕ್ಕೆ ತರುವ, ಪ್ರಾಣ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವನ್ನುಂಟು ಮಾಡುವ ಹಾಗೂ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಸಾಧ್ಯತೆಗಳು ಹೆಚ್ಚಿವೆ ಎಂದು ಎಫ್‍ಐಆರ್ ನಲ್ಲಿ ನಮೂದಿಲಾಗಿದೆ.

ಶಿವಮೊಗ್ಗ ನಗರದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಹಾಗೂ ದಯಾಳು ಅವರ ಸದ್ವರ್ತನೆಗಾಗಿ ಸಿಆರ್‍ಪಿಸಿ 108 ಕಲಂ ಅನ್ವಯ ಒಂದು ವರ್ಷದ ಜಾಮೀನಿನ ಮುಚ್ಚಳಿಕೆ ಪಡೆಯುವಂತೆ ಎಫ್‍ಐಆರ್‍ನಲ್ಲಿ ನ್ಯಾಯಾಲಯವನ್ನು ಕೋರಲಾಗಿದೆ.

ಮಾಡಿದವರಿಗೆ ಶಿಕ್ಷೆ ಇಲ್ಲ- ಆಡಿದವರಿಗೆ ಶಿಕ್ಷೆಯೇ?
ಶಿವಮೊಗ್ಗದಲ್ಲಿ 60 ಅಕ್ರಮ ಕಸಾಯಿಖಾನೆಗಳಿವೆ. ಇವುಗಳನ್ನು ತಕ್ಷಣ ನಿಲ್ಲಿಸಿ ಎಂದು ನಾನು ಭಾಷಣದಲ್ಲಿ ಹೇಳಿದ್ದೆ. ಗೋಹತ್ಯೆ ನಿರಂತರವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸರು ಕ್ರಮಕೈಗೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಗೋಹತ್ಯೆ ಮಾಡಿದವರಿಗೆ ಯಾವುದೇ ಶಿಕ್ಷೆ ಇಲ್ಲ. ಈ ಬಗ್ಗೆ ಮಾತನಾಡಿದ ನನಗೆ ಶಿಕ್ಷೆಯೇ? ಎಂದು ಬಜರಂಗದಳ ಜಿಲ್ಲಾ ಸಂಚಾಲಕ ದೀನ ದಯಾಳು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಸತ್ಯವನ್ನೇ ಮಾತಾನಾಡಿದ್ದೇನೆ. ಈ ಸತ್ಯಕ್ಕೆ ಶಿಕ್ಷೆ ನೀಡಲು ಹೊರಟಿರುವ ಪೊಲೀಸರ ಕ್ರಮ ಸರಿಯಲ್ಲ. ಬೇಕಾದರೆ ನಾನು ಶಿವಮೊಗ್ಗದಲ್ಲಿ ಇರುವ ಕಸಾಯಿಖಾನೆಗಳ ವಿವರ ಕೊಡುವೆ. ಪೊಲೀಸ್ ಇಲಾಖೆ ನನ್ನೊಂದಿಗೆ ಈ ವಿಷಯವಾಗಿ ಬಹಿರಂಗ ಚರ್ಚೆಗೆ ಬರಲಿ ಎಂದು ಅವರು ಹೇಳಿದ್ದಾರೆ.

 

Advertisement
Advertisement