ಕಾರವಾರ: ಸಿಎಂ ಸಿದ್ದರಾಮಯ್ಯ ಕಾರವಾರ ಭೇಟಿ ಸಂದರ್ಭದಲ್ಲೇ ಕೋಮು ಘರ್ಷಣೆ ಸಂಭವಿಸಿದೆ. ಒಂದು ಕೋಮಿನ ಯುವಕನ ದ್ವಿಚಕ್ರ ವಾಹನಕ್ಕೆ ಇನ್ನೊಂದು ಕೋಮಿನ ಆಟೋ ಚಾಲಕ ಆಟೋ ಡಿಕ್ಕಿ ಹೊಡೆಸಿದ ಸಂಬಂಧ ಎರಡು ಕೋಮುಗಳ ಯುವಕರು ಕಲ್ಲುತೂರಾಟ ನಡೆಸಿ ದೊಣ್ಣೆಗಳನ್ನ ಹಿಡಿದು ಹೊಡೆದಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಸ್ ಸ್ಟಾಂಡ್ ನಲ್ಲಿ ನಡೆದಿದೆ.
ಕಲ್ಲು ತೂರಾಟದಿಂದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಲಭೆಯಲ್ಲಿ ಗಾಯಗೊಂಡ ನಗರದ ಶರತ್ ಮಹಾಲೆ ಮತ್ತು ನರಸಿಂಹ ಮೇಸ್ತರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಟೆಂಪೋಗಳ ಗಾಜುಗಳು ಜಖಂ ಆಗಿವೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗಲಭೆ ನಿರತ ಹತ್ತಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದಿದ್ದಾರೆ.
Advertisement
ಸದ್ಯ ಗಲಭೆ ನಿಯಂತ್ರಣಕ್ಕೆ ಬಂದಿದ್ದು ಬಸ್ ಸ್ಟಾಂಡ್ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಾಕಾಬಂಧಿ ಹಾಕಿದ್ದು ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಮೂರು ದಿನಗಳ ಹಿಂದೆ ಚಂದಾವರದಲ್ಲಿ ಧ್ವಜ ನೆಡುವ ವಿಷಯದಲ್ಲಿ ಎರಡು ಕೋಮುಗಳ ನಡುವೆ ಗಲಭೆಯಾಗಿ 27 ಜನ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.