CricketLatestLeading NewsMain PostSports

ಕಾಮನ್‌ವೆಲ್ತ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವನಿತೆಯರ ಶುಭಾರಂಭ – ಮೊದಲ ಪಂದ್ಯದಲ್ಲಿ 3 ವಿಕೆಟ್‌ಗಳ ಜಯ

ಹೋರಾಡಿ ಸೋತ ಭಾರತ - ಜುಲೈ 31 ರಂದು ಭಾರತ Vs ಪಾಕ್ ಸಮರ

Advertisements

ಬರ್ಮಿಂಗ್‌ಹ್ಯಾಮ್: ಬಹು ನಿರೀಕ್ಷಿತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್ ಸಮರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಭಾರತದ ವನಿತೆಯರ ತಂಡ 3 ವಿಕೆಟ್‌ಗಳ ಅಂತರದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡದ ಎದುರು ಸೋಲನ್ನು ಕಂಡಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಟಿ20 ಕ್ರಿಕೆಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಭಾರತದ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ. ಆಸ್ಟ್ರೇಲಿಯಾ ಮಹಿಳಾ ತಂಡದ ಆಟಗಾರ್ತಿಯರಾದ ಆ್ಯಶ್ಲೆ ಗಾರ್ಡನರ್ ಹಾಗೂ ಗ್ರೇಸ್ ಹ್ಯಾರಿಸ್ ಅವರ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ ತಂಡ ಗೆಲುವು ಸಾಧಿಸಿದೆ.

ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ (48), ಸ್ಮೃತಿ ಮಂದಾನಾ (24) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ (52) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿತ್ತು. ಇದನ್ನೂ ಓದಿ: ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ – ಇಂದು ಯಾವ ಸ್ಪರ್ಧೆಗಳು ಎಷ್ಟು ಗಂಟೆಗೆ ಆರಂಭ?

ಭಾರತ ನೀಡಿದ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಅಲಿಸ್ಸಾ ಹೀಲಿ ಶೂನ್ಯಕ್ಕೆ ಔಟಾದರೆ, ನಾಯಕಿ ಮೆಗ್ ಲ್ಯಾನಿಂಗ್ 8 ರನ್ ಗಳಿಸಿ ರೇಣುಕಾ ಸಿಂಗ್ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿದರು. ತಂಡದ ಮೊತ್ತ ಕೇವಲ 34 ರನ್ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿದ ರೇಣುಕಾ, ಭಾರತಕ್ಕೆ ಮೇಲುಗೈ ತಂದುಕೊಟ್ಟರು. ನಾಲ್ಕು ಓವರ್‌ಗಳಲ್ಲಿ 18 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.

ಒಂದು ಹಂತದಲ್ಲಿ 49 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ, ಭಾರತಕ್ಕೆ ಸುಲಭ ತುತ್ತಾಗುವ ಭೀತಿಯಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಗಾರ್ಡನರ್ 52 ಹಾಗೂ ಹ್ಯಾರಿಸ್ 37 ರನ್ ಸಿಡಿಸಿ ಭಾರತದ ಗೆಲುವನ್ನು ಕೈ ತಪ್ಪುವಂತೆ ಮಾಡಿದರು. ಇದನ್ನೂ ಓದಿ: ಇಂದಿನಿಂದ ಕಾಮನ್‍ವೆಲ್ತ್ ಗೇಮ್ಸ್ ಕಲರವ – ಪಿ.ವಿ ಸಿಂಧು ಧ್ವಜಧಾರಿ

6ನೇ ವಿಕೆಟ್‌ಗೆ 51 ರನ್‌ಗಳ ಜೊತೆಯಾಟವಾಡಿದ ಈ ಜೋಡಿ, ತಮ್ಮ ತಂಡದ ಇನಿಂಗ್ಸ್‌ಗೆ ಚೇತರಿಕೆ ನೀಡಿತು. ಹ್ಯಾರಿಸ್ ಕೇವಲ 20 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 37 ರನ್ ಗಳಿಸಿ ಔಟಾದರು. ಗಾರ್ಡನರ್ 35 ಎಸೆತಗಳಲ್ಲಿ 52 ರನ್ ಬಾರಿಸಿ ಅಜೇಯರಾಗುಳಿದರು, ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

ಕೊನೆಯಲ್ಲಿ ಕ್ರೀಸ್‌ಗಿಳಿದು ಅಬ್ಬರಿಸಿದ ಅಲಾನ ಕಿಂಗ್ 18 ರನ್ ಬಿರುಸಿನ ಆಟವಾಡಿ, ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 3 ವಿಕೆಟ್ ಅಂತರದ ಜಯ ಸಾಧಿಸುವಂತೆ ಮಾಡಿದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ ಆಸ್ಟ್ರೇಲಿಯಾ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿತು.

ಭಾರತ ತಂಡವು ಜುಲೈ 31 ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದ್ದು, ಅದೇ ದಿನ ಆಸ್ಟ್ರೇಲಿಯಾ ಬಾರ್ಬಡಾಸ್ ವಿರುದ್ಧ ಸೆಣಸಲಿದೆ.

Live Tv

Leave a Reply

Your email address will not be published.

Back to top button