ಮಡಿಕೇರಿ: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್ ನಲ್ಲಿ ಜುಲೈ 28 ರಿಂದ ಆಗಸ್ಟ್ 8ರ ವರೆಗೆ ನಡೆಯಲಿರುವ 22ನೇ ಕಾಮನ್‌ವೆಲ್ತ್ ಗೇಮ್ಸ್ಗೆ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಕೊಡಗಿನ ಹಾಕಿ ಪ್ರತಿಭೆ ಅಂಕಿತಾ ಸುರೇಶ್ ಅವರು ನಿಯುಕ್ತಿಗೊಂಡಿದ್ದಾರೆ.
ಅಂಕಿತಾ ಸುರೇಶ್ ಅವರು ಸಹಾಯಕ ಕೋಚ್ ಹೊಣೆಯೊಂದಿಗೆ ತಂಡದ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. 2021ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಅಂಕಿತಾ ಸುರೇಶ್ ಅವರ ಗರಡಿಯಲ್ಲಿ ಪಳಗಿದ ಭಾರತ ಮಹಿಳಾ ತಂಡದ ಹಾಕಿ ಕಲಿಗಳು ಅತ್ಯುನ್ನತ ಸಾಧನೆ ಮಾಡಿ ಭಾರತೀಯರ ಮನ ಗೆದ್ದಿದ್ದರು. ಇದನ್ನೂ ಓದಿ: ಪ್ಲೇಯಿಂಗ್ 11ನಲ್ಲಿ ಹೆಸರಿಲ್ಲ ಆದ್ರೂ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ!
ಯಾರಿದು ಅಂಕಿತಾ ಸುರೇಶ್?
ಮೂಲತಃ ಮಡಿಕೇರಿಯವರಾದ ಅಂಕಿತಾ ಸುರೇಶ್ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಉದ್ಯಮಿ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿ. ಈಗಾಗಲೇ ಇಂಗ್ಲೆಂಡ್ ತಲುಪಿ ತಾಲೀಮಿನಲ್ಲಿ ತೊಡಗಿರುವ ಭಾರತ ಮಹಿಳಾ ಹಾಕಿ ತಂಡವು ಮೊದಲ ಪಂದ್ಯದಲ್ಲಿ ಘಾನ ದೇಶದ ತಂಡವನ್ನು ಎದುರಿಸಲಿದೆ. ಅಂಕಿತಾ ಸುರೇಶ್ ಅವರ ಸಹಕಾರದೊಂದಿಗೆ ಭಾರತ ತಂಡ ಜಯಭೇರಿ ಬಾರಿಸಲಿ ಎಂದು ಕೊಡಗಿನ ಜನರು ಹಾರೈಸುತ್ತಿದ್ದಾರೆ.