ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 4 ರನ್‍ಗಳ ರೋಚಕ ಜಯ ಸಾಧಿಸಿದ ಭಾರತದ ಮಹಿಳಾ ತಂಡ ಫೈನಲ್‍ಗೆ ಲಗ್ಗೆಯಿಟ್ಟಿದೆ.
22ನೇ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್ ಸೇರ್ಪಡೆಗೊಂಡಿದ್ದು, ಚೊಚ್ಚಲ ಆವೃತ್ತಿಯಲ್ಲೇ ಭಾರತ ತಂಡ ಫೈನಲ್ ಪ್ರವೇಶಿಸಿ ದಾಖಲೆ ಬರೆದಿದೆ. ಭಾರತ ನೀಡಿದ 165 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ವನಿತೆಯರು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಸಿಡಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡ 4 ರನ್‍ಗಳ ರೋಚಕ ಜಯ ಸಾಧಿಸಿ ಸಂಭ್ರಮಿಸಿತು. ಇದನ್ನೂ ಓದಿ: CWG 2022: ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಅವಿನಾಶ್ ಸಬ್ಲೆ, ಪ್ರಿಯಾಂಕಾ ಗೋಸ್ವಾಮಿ
ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ಗೆಲುವಿಗೆ 14 ರನ್ ಬೇಕಿತ್ತು. ಸ್ನೇಹ ರಾಣಾ ಎಸೆದ ಕೊನೆಯ ಓವರ್‌ನಲ್ಲಿ ಕೇವಲ 9 ರನ್ ಅಷ್ಟೇ ಸಿಡಿಸಲು ಶಕ್ತರಾದ ಇಂಗ್ಲೆಂಡ್ ಬ್ಯಾಟರ್‌ಗಳು ತವರಿನಲ್ಲಿ ಸೋತು ನಿರಾಸೆ ಅನುಭವಿಸಿದರು. ಇಂಗ್ಲೆಂಡ್ ಪರ ಡ್ಯಾನಿ ವ್ಯಾಟ್ 35 ರನ್ (27 ಎಸೆತ, 6 ಬೌಂಡರಿ), ನ್ಯಾಟ್ ಸಿವರ್ 41 ರನ್ (43 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಆಮಿ ಜೋನ್ಸ್ 31 ರನ್ (24 ಎಸೆತ, 3 ಬೌಂಡರಿ) ಸಿಡಿಸಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಭಾರತೀಯ ಫೇಮಸ್ ಫುಟ್ಬಾಲ್ ಆಟಗಾರ ಇನ್ನಿಲ್ಲ
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ಸ್ಮೃತಿ ಮಂದಾನ ಭರ್ಜರಿ ಆರಂಭ ನೀಡಿದರು. ಉತ್ತಮ ಲಯದಲ್ಲಿ ಕಾಣಿಸಿಕೊಂಡ ಮಂದಾನ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಇವರಿಗೆ ಅಗ್ರಕ್ರಮಾಂಕದ ಬ್ಯಾಟರ್ ಜೆಮಿಮಾ ರಾಡ್ರಿಗಸ್ ಉತ್ತಮ ಬೆಂಬಲ ನೀಡಿದರು. ಮಂದಾನ 61 ರನ್ (32 ಎಸೆತ, 8 ಬೌಂಡರಿ, 3 ಸಿಕ್ಸ್) ಚಚ್ಚಿ ಔಟ್ ಆದರೆ, ಜೆಮಿಮಾ ರಾಡ್ರಿಗಸ್ ಅಜೇಯ 44 ರನ್ (31 ಎಸೆತ, 7 ಬೌಂಡರಿ) ಸಿಡಿಸಿ ತಂಡದ ಮೊತ್ತವನ್ನು 160ರ ಗಡಿದಾಟಿಸಿದರು. ಅಂತಿಮವಾಗಿ ಭಾರತ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಪೇರಿಸಿತು.
ಇಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ 2ನೇ ಸೆಮಿಫೈನಲ್ ಪಂದ್ಯಾಟ ನಡೆಯಲಿದ್ದು, ಈ ಪಂದ್ಯದಲ್ಲಿ ಗೆದ್ದ ತಂಡ ಭಾರತವನ್ನು ಫೈನಲ್‌ನಲ್ಲಿ ಎದುರಿಸಲಿದೆ. ಆಗಸ್ಟ್ 7 ರಂದು ಫೈನಲ್ ಪಂದ್ಯಾಟ ನಡೆಯಲಿದೆ.