ಉಡುಪಿ: ಸರ್ಕಾರದಿಂದ ಇನ್ನಷ್ಟು ಪ್ರೋತ್ಸಾಹದ ಅಗತ್ಯ ಇದೆ. ನಾಲ್ಕು ವರ್ಷದ ಹಿಂದೆ ಪದಕ ಗೆದ್ದಾಗ ಜೆಡಿಎಸ್ ಸರ್ಕಾರ ಇತ್ತು. ಕುಮಾರಸ್ವಾಮಿ 20 ಲಕ್ಷ ರೂ. ಸರ್ಕಾರಿ ಉದ್ಯೋಗ ಭರವಸೆ ನೀಡಿದ್ದರು. ಆ ಭರವಸೆ ಇನ್ನೂ ಈಡೇರಿಲ್ಲ. ಬಿಜೆಪಿ ಸರ್ಕಾರ ಎಂಟು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದೆ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಇದು ಬಹಳ ಕಡಿಮೆ ಎಂದು ಕಾಮನ್‍ವೆಲ್ತ್ ಪದಕ ವಿಜೇತ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇಂಗ್ಲೆಂಡ್‍ನಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕರ್ನಾಟಕದ ವೇಟ್ ಲಿಫ್ಟರ್ ಗುರುರಾಜ್ ಪೂಜಾರಿ ಕಂಚಿನ ಪದಕ ಗೆದ್ದು, ತವರಿಗೆ ಆಗಮಿಸಿದರು. ಈ ವೇಳೆ ಉಡುಪಿ ಜಿಲ್ಲಾಡಳಿತ ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದೆ. ಉಡುಪಿಯಲ್ಲಿ ಯುವ ಕ್ರೀಡಾಪಟುಗಳು ಮತ್ತು ಜಿಲ್ಲಾಡಳಿತ ನಡೆಸಿದ ಸನ್ಮಾನದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುರಾಜ್ ಪೂಜಾರಿ, ಖುಷಿಯ ಜೊತೆ ನೋವನ್ನು ಬಿಚ್ಚಿಟ್ಟಿದ್ದಾರೆ. ಹರಿಯಾಣ, ಪಂಜಾಬ್, ಹಿಮಾಚಲಪ್ರದೇಶ ಸರ್ಕಾರ ಅಲ್ಲಿನ ಪದಕ ಗೆದ್ದ ಕ್ರೀಡಾಪಟುಗಳಿಗೆ 20-50 ಲಕ್ಷ ರೂ. ತನಕ ಬಹುಮಾನ ನೀಡಿದೆ. ರಾಜ್ಯ ಸರ್ಕಾರದ ಬಳಿ ಸರ್ಕಾರಿ ನೌಕರಿ ಕೇಳಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ
ಉಡುಪಿಗೆ ಬಂದು ತುಂಬಾ ಸಂತೋಷ ಆಗುತ್ತಿದೆ. ಎಲ್ಲರಿಗೂ ನಾನು ಆಭಾರಿ. ನಾನು ದೇಶಕ್ಕೆ ಎರಡು ಪದಕ ತಂದಿದ್ದು ಹೆಮ್ಮೆ ಆಗುತ್ತಿದೆ. ಕಳೆದ ಬಾರಿಯೂ ಪದಕ ಗೆದ್ದಾಗ ಎಲ್ಲರೂ ನನ್ನನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ ಗೌರವಿಸಿದ್ದಾರೆ. ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಹಿಂದಿಗಿಂತಲೂ ಈ ಬಾರಿ ಅಧಿಕ ಪದಕಗಳು ಭಾರತಕ್ಕೆ ಬರಲಿದೆ. ದೇಶದ ಸಾಧನೆಗೆ ಪ್ರಧಾನಿ ಮೋದಿ ಕಾರಣ. ಕ್ರೀಡೆಗೆ ಕೇಂದ್ರ ಸರ್ಕಾರ ಬಹಳ ಬೆಂಬಲ ಕೊಡುತ್ತಿದೆ. ಮುಂದಿನ ಕಾಮನ್‍ವೆಲ್ತ್‌ನಲ್ಲಿ ಭಾರತ ದೊಡ್ಡ ಸಾಧನೆ ಮಾಡಲಿದೆ. ಪರಿಶ್ರಮ ಮತ್ತು ಗುರಿ ಇದ್ದರೆ ಸಾಧನೆ ಮಾಡಬಹುದು ಎಂದು ಅಭಿಪ್ರಾಯಹಂಚಿಕೊಂಡಿದ್ದಾರೆ. ಇದನ್ನೂ ಓದಿ: CWG 2022: ಇಂದು ಕೊನೆಯ ದಿನ – ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರುವ ತವಕದಲ್ಲಿ ಭಾರತ