ಗೋಲ್ಡ್ ಕೋಸ್ಟ್: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಈವರೆಗೆ 8 ಚಿನ್ನ, 4 ಬೆಳ್ಳಿ, 5 ಕಂಚನ್ನು ಪಡೆಯುವ ಮೂಲಕ ಒಟ್ಟು 17 ಪದಕಗಳನ್ನು ಪಡೆದಿದೆ. ಹೀಗಾಗಿ ಇದೀಗ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೇರಿದೆ. 85 ಪದಕಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.
ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಜೀತುರಾಯ್ 235.1 ಅಂಕಗಳನ್ನು ಗಳಿಸುವುದರ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದೇ ಸ್ಪರ್ಧೆಯಲ್ಲಿ 214.3 ಅಂಕಗಳನ್ನು ಪಡೆಯುವ ಮೂಲಕ ಭಾರತದ ಮತ್ತೋರ್ವ ಶೂಟರ್ ಓಂ ಮಿಥರ್ವಾಲ್ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಆಸ್ಟ್ರೇಲಿಯಾದ ಕೆರ್ರಿ ಬೆಲ್ 233.5 ಅಂಕಗಳನ್ನು ಪಡೆದು ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಮೆಹುಲಿ ಘೋಷ್ ಮತ್ತು ಸಿಂಗಾಪುರದ ಮಾರ್ಟಿನಾ ಲಿಂಡ್ಸೆ ವೆಲೊಸೋ ಅವರ ನಡುವೆ ತೀವ್ರ ಪೈಪೋಟಿ ನಡೆಯಿತು.
ಇಬ್ಬರು 247.2 ಅಂಕಗಳನ್ನು ಗಳಿಸಿದರು. ಮಾರ್ಟಿನಾ 10.3 ಮೀಟರ್ ಅಂತರದಲ್ಲಿ ಗುರಿ ಛೇದಿಸಿದರೆ ಮೆಹುಲಿ 9.9 ಮೀಟರ್ ಅಂತರದ ಗುರಿಯನ್ನು ಛೇದಿಸಿದರು. ಹಾಗಾಗಿ ಮೆಹುಲಿ ಘೋಷ್ ಅವರು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಇದೇ ಸ್ಪರ್ಧೆಯಲ್ಲಿ 9.9 ಮೀಟರ್ ಅಂತರದಿಂದ ಗುರಿ ಛೇದಿಸಿದ ಭಾರತದ ಅಪೂರ್ವಿ ಚಂಡೇಲಾ ಅವರು 225.3 ಅಂಕಗಳನ್ನು ಗಳಿಸುವುದರ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ.