– ಕಾವೇರಿ ಆರತಿ ಸಂಬಂಧ ಕೆಆರ್‌ಎಸ್ ಡ್ಯಾಂ ಸ್ಥಳ ಪರಿಶೀಲಿಸಿದ ಡಿಕೆಶಿ
– ಕೇರಳ, ತಮಿಳುನಾಡು ಜನರೂ ಪೂಜೆ ಸಲ್ಲಿಸಬಹುದು ಎಂದ ಡಿಸಿಎಂ
ಬೆಂಗಳೂರು: ರಾಜ್ಯದ ಜೀವನದಿ ಕಾವೇರಿ ಮಾತೆಗೆ ನಮನ ಹಾಗೂ ಪೂಜೆ ಸಲ್ಲಿಸಲು ಉತ್ತರ ಭಾರತದ (North India) ವಾರಣಾಸಿ ಹಾಗೂ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಗಂಗಾ ನದಿಗೆ ನಡೆಸುವ ʻಗಂಗಾರತಿʼಯ ಮಾದರಿಯಲ್ಲಿ ಕೃಷ್ಣರಾಜಸಾಗರದಲ್ಲಿ ಕಾವೇರಿ ಆರತಿ (Cauvery Aarti) ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಅದಕ್ಕಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಚಿಸಿರುವ ಸಮಿತಿಯ ಶಿಫಾರಸ್ಸುಗಳ ಅನುಷ್ಠಾನಕ್ಕಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರ ನೇತೃತ್ವದಲ್ಲಿ 8 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಶಾಸಕರಾದ ಎ.ಬಿ.ರಮೇಶ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಮಂಡ್ಯ ಜಿಲ್ಲಾಧಿಕಾರಿ, ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ, ಕಾರ್ಮಿಕ ಇಲಾಖೆಯ ಉಪ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಹಾಗೂ ಮೈಸೂರಿನ ನೀರಾವರಿ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಅವರನ್ನು ಸದಸ್ಯರನ್ನಾಗಿ ಮಾಡಿ ಆದೇಶ ಹೊರಡಿಸಲಾಗಿದೆ.
ಕಾವೇರಿ ಆರತಿ ಸಂಬಂಧ ಕೆಆರ್‌ಎಸ್ ವೀಕ್ಷಣೆ:
ಇನ್ನೂ ಕೆಆರ್‌ಎಸ್ ಡ್ಯಾಂ ಬಳಿ ಕಾವೇರಿ ಆರತಿ ಪ್ರಾರಂಭ ಮಾಡುವ ಬಗ್ಗೆ ಅಂತಿಮ ಹಂತದ ತಯಾರಿಗಳು ಚುರುಕಾಗಿ ನಡೆಯುತ್ತಿವೆ. ಈ ಸಂಭಂದ ಇಂದು ಕೆಆರ್‌ಎಸ್ ಡ್ಯಾಂನಲ್ಲಿ ಸ್ಥಳ ಪರಿಶೀಲನೆ ನಡೆಸಿ ಬಳಿಕ ಅಧಿಕಾರಿಗಳೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಸಭೆ ನಡೆಸಿದರು. ಇದನ್ನೂ ಓದಿ: ಅನಧಿಕೃತ, ಅಕ್ರಮ ಬಡಾವಣೆ ನಿರ್ಮಾಣ ಮಾಡಿದ್ರೆ ಸರ್ಕಾರದಿಂದಲೇ ಮುಟ್ಟುಗೋಲು – ಕೃಷ್ಣಬೈರೇಗೌಡ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂಗೆ ಭೇಟಿ ನೀಡಿದ ಡಿಕೆಶಿ ಆರಂಭದಲ್ಲಿ ಡ್ಯಾಂ ಮೇಲ್ಭಾಗದಲ್ಲಿ ಹೆಜ್ಜೆ ಹಾಕಿದರು. ಈ ವೇಳೆ ಕಾವೇರಿ ಆರತಿ ನಡೆಸಲು ಯಾವುದು ಸೂಕ್ತ ಜಾಗ ಎಂದು ವೀಕ್ಷಣೆ ನಡೆಸಿದರು. ಬಳಿಕ ಕಾವೇರಿ ಆರತಿಯ ಪೂರ್ವಪರ ಹೇಗೆಲ್ಲಾ ಇರಬೇಕು ಅದಕ್ಕೆ ಬೇಕಿರುವ ಸಂಪನ್ಮೂಲಗಳ ಬಗ್ಗೆ ಚರ್ಚೆ ಮಾಡಲಾಯಿತು. ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಜ್ಞಾನೋದಯ – ಕ್ಷಮೆಯಾಚಿಸಿದ ಬಂಡಿಸಿದ್ದೇಗೌಡ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ನಮ್ಮ ಸರ್ಕಾರ ಕಾವೇರಿ ಆರತಿಯ ಪವಿತ್ರ ಕಾರ್ಯ ನಡೆಸುತ್ತಿದೆ. ಸದ್ಯ ಕ್ಯಾಬಿನೆಟ್‌ನಲ್ಲಿ 98 ಕೋಟಿ ವೆಚ್ಚದ ಯೋಜನೆ ಮಂಜೂರಾಗಿದೆ. ಕಾವೇರಿ ಆರತಿ ರಾಜ್ಯದ ಸಂಸ್ಕೃತಿ, ಕಾವೇರಿ ನೀರು ಅವಲಂಬಿಸಿರುವ ಎಲ್ಲಾ ಜನರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಕೇರಳ, ತಮಿಳುನಾಡು ಜನರು ಬಂದು ಪೂಜೆ ಸಲ್ಲಿಸಬಹುದು, ನೇಮಕಗೊಂಡ ಸಮಿತಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಿದೆ ಎಂದು ತಿಳಿಸಿದರು.
ಕಾವೇರಿ ಆರತಿ ಯಾವ ರೀತಿ ನಡೆಯಬೇಕು ಎಂಬುದರ ಬಗ್ಗೆ ಸಲಹೆ ನೀಡಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಲಾಗುವುದು. ಕಾವೇರಿ ಆರತಿ ಜನ ಬಂದು ವಾಪಸ್ ಆಗುವವರೆಗೂ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗುತ್ತದೆ. ದಸರಾಗೆ ಈ ಕಾವೇರಿ ಆರತಿ ಮಾಡಬೇಕೆಂದು ಉದ್ದೇಶ ಇದೆ. ಹೀಗಾಗಿ ಕೆಲಸಗಳನ್ನು ಚುರುಕುಗೊಳಿಸಿದ್ದೇವೆ ಎಂದು ವಿವರಿಸಿದರು. ಇದನ್ನೂ ಓದಿ: ಮೂರೇ ದಿನದ ಅಂತರದಲ್ಲಿ ಕಾಡಾನೆ ದಾಳಿಗೆ 2 ಜೀವ ಬಲಿ – ಗ್ರಾಮಸ್ಥರಲ್ಲಿ ಆತಂಕ