ಹೈದರಾಬಾದ್: ಕಾಲೇಜಿನಲ್ಲಿ ಶುಲ್ಕ ಪಾವತಿಸುವಂತೆ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದಿನ ಸರೋನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಅರ್ಚನಾ (15) ನೇಣಿಗೆ ಶರಣಾದ ವಿದ್ಯಾರ್ಥಿನಿ. ಈಕೆ ಚೈತನ್ಯಪುರಿಯ ಶ್ರೀ ಚೈತನ್ಯ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಂಗಳವಾರ ಕಾಲೇಜಿನಿಂದ ಬಂದು ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Advertisement
Advertisement
ಅರ್ಚನಾ ಕಾಲೇಜಿಗೆ ಒಂದು ಲಕ್ಷ ರೂ. ಶುಲ್ಕ ಕಟ್ಟಬೇಕಿತ್ತು. ಪೋಷಕರು ಎರಡು ತಿಂಗಳ ಹಿಂದೆ 50,000 ರೂ. ಶುಲ್ಕ ಮಾತ್ರ ಪಾವತಿಸಿದ್ದರು. ಅರ್ಚನಾ ಭಾನುವಾರ ರಾಖಿ ಹಬ್ಬದ ಪ್ರಯುಕ್ತ ತನ್ನ ಗ್ರಾಮಕ್ಕೆ ಹೋಗಿ ಮರಳಿ ಮಂಗಳವಾರ ಕಾಲೇಜಿಗೆ ಹೋಗಿದ್ದಾಳೆ. ಆಗ ಕಾಲೇಜಿನ ಸಿಬ್ಬಂದಿ ಇನ್ನು ಕೆಲವು ದಿನಗಳಲ್ಲಿ ಉಳಿದ ಶುಲ್ಕವನ್ನು ಪಾವತಿಸಬೇಕೆಂದು ಹೇಳಿದ್ದಾರೆ. ನಂತರ ಅರ್ಚನಾ ಮನನೊಂದು ಹಾಸ್ಟೆಲ್ ರೂಮಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
Advertisement
ವಿದ್ಯಾರ್ಥಿಗಳು ಮಧ್ಯಾಹ್ನ ಊಟಕ್ಕೆಂದು ಹಾಸ್ಟೆಲಿನ ರೂಮಿಗೆ ಬಂದಿದ್ದಾರೆ. ಆಗ ನೇಣು ಬಿಗಿದ ಸ್ಥಿತಿಯಲ್ಲಿ ಅರ್ಚನಾ ಪತ್ತೆಯಾಗಿದ್ದಾಳೆ. ಕೂಡಲೇ ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್ ಗೆ ತಿಳಿಸಿದ್ದಾರೆ. ನಂತರ ಅರ್ಚನಾಳನ್ನು ಸಮೀಪದ ಓಮ್ನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಆಕೆ ಮೃತಪಟ್ಟಿದ್ದಳು. ಬಳಿಕ ಅಲ್ಲಿಂದ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರಿಗೆ ಈ ಬಗ್ಗೆ ತಿಳಿಸಿದ್ದಾರೆ.
Advertisement
ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ಬಂದು ಅರ್ಚನಾ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ನಾವು ಒಂದು ವಾರದಲ್ಲೇ ಉಳಿದ ಶುಲ್ಕವನ್ನು ಪಾವತಿಸಲು ಸಿದ್ಧರಿದ್ದೆವು. ಆದರೆ ಕಾಲೇಜಿನ ಆಡಳಿತ ಮಂಡಳಿ ನಮ್ಮ ಮಗಳಿಗೆ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವ ರೀತಿ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಶುಲ್ಕದ ಹೆಸರಿನಲ್ಲಿ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದೆ. ಆದ್ದರಿಂದ ಈ ಬಗ್ಗೆ ತನಿಖೆ ಮಾಡಿ ಕಾಲೇಜಿನ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ವಿದ್ಯಾರ್ಥಿ ಸಂಘಗಳು ಪ್ರತಿಭಟನೆಯನ್ನು ಕೂಡ ಮಾಡಿದ್ದವು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv